ನವದೆಹಲಿ: ಭಾರತದ ದೂರಸಂಪರ್ಕ ಸಚಿವಾಲಯ (Telecom ministry of india) ದೇಶದ ಎಲ್ಲಾ ಸ್ಮಾರ್ಟ್‌ಫೋನ್ (Smart phones) ತಯಾರಕರಿಗೂ ಹೊಸ ಸೂಚನೆ ನೀಡಿದ್ದು, ಇನ್ಮುಂದೆ ಎಲ್ಲಾ ಹೊಸ ಫೋನ್ ಗಳಲ್ಲಿ ಸರ್ಕಾರಿ ಸ್ವಾಮ್ಯದ ಸೈಬರ್ ಸೆಕ್ಯುರಿಟಿ (Cyber security) ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಇನ್ಸ್ಟಾಲ್ ಮಾಡುವಂತೆ ಸೂಚಿಸಿದೆ.
ನವೆಂಬರ್ 28 ರಂದು ಈ ಆದೇಶ ಹೊರಬಿದ್ದಿದೆ.
ಹೀಗಾಗಿ ಸ್ಮಾರ್ಟ್‌ಫೋನ್ ತಯಾರಕರಿಗೆ ಇನ್ಮುಂದೆ ಎಲ್ಲಾ ಹೊಸ ಫೋನ್ ಗಳಲ್ಲಿ ಸರ್ಕಾರದ 'ಸಂಚಾರ್ ಸಾಥಿ ಅಪ್ಲಿಕೇಶನ್' ಅನ್ನು ಇನ್ ಬಿಲ್ಟ್ ಸ್ಥಾಪಿಸಲು 90 ದಿನಗಳ ಕಾಲಾವಕಾಶ ನೀಡಿದೆ. ಈಗಾಗಲೇ ಬಳಕೆಯಲ್ಲಿರುವ ಫೋನ್ ಗಳಲ್ಲಿ ಸಾಫ್ಟ್ ವೇರ್ ಅಪ್ಡೇಟ್ ಮೂಲಕ ಇದನ್ನು ಇನ್ಸ್ಟಾಲ್ ಮಾಡುವಂತೆ ಮಾಡಬೇಕು ಎಂದು ಕೂಡ ಸೂಚಿಸಲಾಗಿದೆ. ಈ ಸರ್ಕಾರಿ ಸ್ವಾಮ್ಯದ ಅಪ್ಲಿಕೇಶನ್ ಬಳಕೆದಾರರಿಗೆ ಅನುಮಾನಾಸ್ಪದ ಕರೆಗಳನ್ನು ರಿಪೋರ್ಟ್ ಮಾಡಲು, IMEI ಗಳನ್ನು ಪರಿಶೀಲಿಸಲು ಮತ್ತು ಕದ್ದ ಫೋನ್ ಗಳ ಬಳಕೆಯನ್ನು ನಿರ್ಬಂಧಿಸಲು ಅವಕಾಶ ಮಾಡಿಕೊಡುತ್ತದೆ.
ಹೀಗಾಗಿ ಟೆಲಿಕಾಂ ಇಲಾಖೆ (DoT) ತನ್ನ ಹೇಳಿಕೆಯಲ್ಲಿ ನಾಗರಿಕರು ಜಾಗರೂಕರಾಗಿರಿ ಮತ್ತು ವಿರೂಪಗೊಂಡ IMEI ಸಂಖ್ಯೆಗಳನ್ನು ಹೊಂದಿರುವ ಮೊಬೈಲ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದೆ. ಕಾನ್ಫಿಗರ್ ಮಾಡಬಹುದಾದ ಅಥವಾ ವಿರೂಪಗೊಂಡ IMEI ಗಳನ್ನು ಹೊಂದಿರುವ ಮೋಡೆಮ್‌ಗಳು, ಮಾಡ್ಯೂಲ್‌ಗಳು ಮತ್ತು ಸಿಮ್ ಬಾಕ್ಸ್‌ಗಳಂತಹ ಸಂಗ್ರಹಿಸಿದ ಅಥವಾ ಜೋಡಿಸಲಾದ ಫೋನ್ ಗಳನ್ನು ಖರೀದಿಸುವುದರ ಅಥವಾ ಬಳಸುವುದರ ವಿರುದ್ಧವೂ ಎಚ್ಚರಿಕೆ ನೀಡಿದೆ.




