ಚೆನ್ನೈ: ತಮಿಳುನಾಡಿನ ರಾಜ ಭವನವದ ಹೆಸರನ್ನು ಲೋಕ ಭವನ ಎಂದು ಅಧಿಕೃತವಾಗಿ ಬದಲಾವಣೆ ಮಾಡಲಾಗಿದೆ ಎಂದು ರಾಜ್ಯಪಾಲ ಕಚೇರಿಯು ಸೋಮವಾರ ತಿಳಿಸಿದೆ.
ಜನ ಕೇಂದ್ರಿತ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಹೆಸರು ಬದಲಾವಣೆ ಮಾಡಲಾಗಿದೆ. ಇದು ತಕ್ಷಣವೇ ಜಾರಿಯಾಗಲಿದೆ.
ರಾಜ ಭವನ ಎನ್ನುವುದು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಹೆಸರು ಬದಲಾವಣೆಯು ಸರ್ಕಾರದ ಯೋಜನೆಗಳಲ್ಲಿ ಜನರ ಭಾಗವಹಿಸುವಿಕೆಯನ್ನು ಉತ್ತಮಗೊಳಿಸುತ್ತದೆ. ದೇಶದ ಸಾಂಸ್ಕೃತಿಕ ಹಾಗೂ ನಾಗರಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ತಮಿಳುನಾಡಿನ ಸಹೋದರ ಹಾಗೂ ಸಹೋದರಿಯರ ಕನಸುಗಳನ್ನು ಸಾಕಾರಗೊಳಿಸುತ್ತ ಹೆಜ್ಜೆಹಾಕಲು ನೆರವಾಗುತ್ತದೆ ಎಂದು ತಿಳಿಸಿದೆ.
ಕಾರ್ಯಕ್ರಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಲೋಕ ಭವನವನ್ನು ತಮಿಳಿನಲ್ಲಿ 'ಮಕ್ಕಳ್ ಮಾಳಿಗೈ' ಎಂದು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದೆ.
ಹೆಸರು ಬದಲಾವಣೆ ಕುರಿತು ನ.30ರಂದು ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 'ಹೆಸರು ಬದಲಾವಣೆಗಿಂತ ಮುಖ್ಯವಾಗಿ ಸರ್ಕಾರದ ಕುರಿತ ಅವರ ಮನಸ್ಥಿತಿ ಬದಲಾಗಬೇಕಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಷ್ಟೇ' ಎಂದಿದ್ದರು.
ಹಲವು ತಿಂಗಳಿನಿಂದ ಸ್ಟಾಲಿನ್ ನಾಯಕತ್ವದ ಡಿಎಂಕೆ ಸರ್ಕಾರ ಹಾಗೂ ರಾಜ್ಯಪಾಲ ಆರ್.ಎನ್.ರವಿ ಅವರ ನಡುವೆ ತಿಕ್ಕಾಟ ನಡೆಯುತ್ತಿದೆ.




