ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಮತದಾನದ ಹಿನ್ನೆಲೆಯಲ್ಲಿ ಚುನಾವಣಾ ಸಮಗ್ರಿ ವಿತರಣೆ ಹಾಗೂ ಸ್ವೀಕೃತಿಗಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ಒಟ್ಟು ಒಂಬತ್ತು ಕೇಂದ್ರಗಳ ಮೂಲಕ ಬುಧವಾರ ಚುನಾವಣಾ ಸಾಮಗ್ರಿ ವಿತರಿಸಲಾಯಿತು. ಆರು ಬ್ಲಾಕ್ ಪಂಚಾಯತ್ ಮಟ್ಟದಲ್ಲಿ ಮತ್ತು ಮೂರು ನಗರಸಭಾ ಮಟ್ಟದಲ್ಲಿ ಈ ಕೇಂದ್ರ ಕಾರ್ಯಾಚರಿಸುತ್ತಿದೆ. ಚುನಾವಣಾ ಸಾಂಗ್ರಿವಿತರಣಾ ಕಾರ್ಯ ಮಧ್ಯಾಹ್ನ ಒಂದು ಗಂಟೆಯೊಳಗೆ ಪೂರ್ತಿಗೊಂಡು ಕರ್ತವ್ಯಕ್ಕೆ ನಿಯೋಜಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತಗಟ್ಟೆಗೆ ತೆರಳಿದ್ದಾರೆ.
ಮತಗಟ್ಟೆಗೆ ಸಿಬ್ಬಂದಿಯನ್ನು ಕರೆದೊಯ್ಯಲು 207 ಬಸ್‍ಗಳು, 111 ಮಿನಿ ಬಸ್‍ಗಳು, 69 ಟ್ರಾವೆಲರ್ ಮತ್ತು 32 ಲಘು ಮೋಟಾರ್ ವಾಹನಗಳು ಸೇರಿದಂತೆ ಒಟ್ಟು 689 ವಾಹನಗಳನ್ನು ಬಳಸಿಕೊಳ್ಳಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 38 ಗ್ರಾಮ ಪಂಚಾಯಿತಿಗಳು, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯಿತಿಗಳು ಮತ್ತು ಒಂದು ಜಿಲ್ಲಾ ಪಂಚಾಯಿತಿ ಸೇರಿದಂತೆ ಒಟ್ಟು 48 ಸ್ಥಳೀಯಾಡಳಿತ ಸಂಸ್ಥೆಗಳಿದ್ದು, ಡಿಸೆಂಬರ್ 11 ರಂದು ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯಿತಿಗಳ 725 ವಾರ್ಡ್‍ಗಳಲ್ಲಿ ಒಟ್ಟು 1242 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ನಗರಸಭೆಗಳ 120 ವಾರ್ಡ್‍ಗಳಲ್ಲಿ128 ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 1370 ಮತಗಟ್ಟೆ ಕಾರ್ಯಾಚರಿಸಲಿದೆ. ಬ್ಲಾಕ್ ಪಂಚಾಯಿತಿಯ 92, ಜಿಲ್ಲಾ ಪಂಚಾಯಿತಿಯಲ್ಲಿ 18 ವಿಭಾಗ ಸೇರಿದಂತೆ ಜಿಲ್ಲೆಯ ಒಟ್ಟು 955 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಬಿಗು ಬಂದೋಬಸ್ತ್:
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಘಿದೆ.ಜಿಲ್ಲೆಯಲ್ಲಿ 436ಸೂಕ್ಷ್ಮ ಹಾಗೂ 97ಅತಿ ಸೂಕ್ಷ್ಮ ಮತಗಟ್ಟೆಗಳಾಗಿ ವಿಭಜಿಸಲಾಗಿದ್ದು, ಜಿಲ್ಲಾದ್ಯಂತ ಹೆಚ್ಚುವರಿಯಾಗಿ ಪೊಲೀಸರನ್ನು ಹಾಗೂ ರ್ಯಾಪಿಡ್ ಆ್ಯಕ್ಷನ್ ಫೋರ್ಸ್‍ಗಳನ್ನೂ ನಿಯೋಜಿಸಲಾಗಿದೆ.

