ಕಾಸರಗೋಡು: ರಾಷ್ಟ್ರೀಯ ಹುಲಿ ಗಣತಿಯ ಅಂಗವಾಗಿ ಕಾಸರಗೋಡು ಜಿಲ್ಲೆಯ ಮೀಸಲು ಅಭಯಾರಣ್ಯ ಪ್ರದೇಶದಲ್ಲಿ ಡಿ. 1ರಿಂದ ಕೈಗೊಳ್ಳಲಾಗಿರುವ ಹುಲಿ ಗಣತಿಯ ಸಮೀಕ್ಷೆ ಪೂರ್ತಿಗೊಂಡಿದ್ದು, ಜಿಲ್ಲೆಯಲ್ಲಿ ಈ ಬಾರಿಯ ಸಮೀಕ್ಷೆಯಲ್ಲೂ ಹುಲಿಯ ಇರುವಿಕೆ ಪತ್ತೆಯಾಗಿಲ್ಲ. ಇದೇ ಸಂದರ್ಭ ಅರನ್ಯ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಗಿರುವುದನ್ನು ಸಮೀಕ್ಷೆಯಿಂದ ಪತ್ತೆಹಚ್ಚಲಾಗಿದೆ. ಚಿರತೆಗಳ ಸ್ಪಷ್ಟ ಲೆಕ್ಕಾಚಾರ ಲಭ್ಯವಾಗದಿದ್ದರೂ, ಜಿಲ್ಲೆಯ ಹಲವೆಡೆ ಚಿರತೆ ವಾಸಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ.
ಕಾಸರಗೋಡು ಜಿಲ್ಲೆಯ ದಟ್ಟಾರಣ್ಯದೊಳಗೆ ಚಿರತೆ ಸಂಖ್ಯೆ ಕಡಿಮೆಯಾಗಿ ಅದು ಜನವಾಸವಿರುವ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶವನ್ನು ಆಶ್ರಯಿಸಿ ಬದುಕುತ್ತಿರುವುದು ಸಮೀಕ್ಷೆಯಿಂದ ವ್ಯಕ್ತವಾಘಿದೆ.
ಕೇರಳದ ಅರಣ್ಯ ಪ್ರದೇಶವನ್ನು 684 ಬ್ಲಾಕ್ ಗಳಾಗಿ ವಿಭಜಿಸಿ ಗಣತಿ ನಡೆದಿದೆ. ಮೊದಲ ದಿನದಿಂದ ಮೊದಲ್ಗೊಂಡು ಸತತ ಮೂರು ದಿನಗಳ ಕಾಲ ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೃಗಗಳ ಸಾನ್ನಿಧ್ಯ, ಅವುಗಳ ಕಾಲ್ಗುರುತು, ಮಲ ವಿಸರ್ಜನೆ, ಮರಗಳನ್ನು ಕೊರೆದ ಕುರುಹು, ವಾಸನೆ, ಮರಗಳಲ್ಲಿ ಉಗುರಿನ ಗುರುತು, ಶಬ್ದದ ಸುಳಿವು ಮತ್ತು ಖುದ್ದು ಕಾಣಲ್ಪಟ್ಟ ಗಮನಿಸುವಿಕೆ ಇತ್ಯಾದಿಗಳ ಆಧಾರದಲ್ಲಿ ಸಮೀಕ್ಷೆ ನಡೆಯಿತು. ಬಳಿಕದ ಎರಡು ದಿನ ನಿಗದಿತ ಬ್ಲಾಕ್ ಗಳಲ್ಲಿ
ಪ್ರಾಣಿ ಸಂಚಾರದ ನಿರೀಕ್ಷಣಾ ದಾರಿ ಗುರುತಿಸಿ ಅವುಗಳ ಚಲನವಲನ ವೀಕ್ಷಿಸುವ ಪ್ರಕ್ರಿಯೆ ನಡೆಸಲಾಗಿದೆ.
ಹುಲಿ ಸಾನ್ನಿಧ್ಯ ಲಕ್ಷಣ ಗುರುತಿಸುವ ಉದ್ದೇಶದೊಂದಿಗೆ ಕಾಸರಗೋಡು ಜಿಲ್ಲೆಯ ಮುಳಿಯಾರು, ಕಾರಡ್ಕ, ಪರಪ್ಪ, ಅಡೂರು, ಮಂಡೆಕೋಲು, ಪನತ್ತಡಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿ ಪ್ರಕ್ರಿಯೆ ನಡೆಸಲಾಗಿತ್ತು.

