ಟೆಲ್ ಅವೀವ್: ಭ್ರಷ್ಟಾಚಾರ ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕೆಂಬ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕೋರಿಕೆಯನ್ನು ಮಾನ್ಯ ಮಾಡಬಾರದು ಎಂದು ಆಗ್ರಹಿಸಿ ಅಧ್ಯಕ್ಷ ಇಸಾಕ್ ಹೆರ್ಜೋಗ್ ಅವರ ನಿವಾಸದ ಎದುರು ರವಿವಾರ ತಡರಾತ್ರಿ ಬೃಹತ್ ಪ್ರತಿಭಟನೆ ನಡೆದಿರುವುದಾಗಿ ವರದಿಯಾಗಿದೆ.
ದೀರ್ಘಾವಧಿಯಿಂದ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯಲ್ಲಿ ತನಗೆ ಕ್ಷಮಾದಾನ ನೀಡಬೇಕೆಂದು ರವಿವಾರ ನೆತನ್ಯಾಹು ಅಧ್ಯಕ್ಷರಿಗೆ ಅಧಿಕೃತ ಕೋರಿಕೆ ಸಲ್ಲಿಸಿದ್ದರು. ಆದರೆ ತಪ್ಪೊಪ್ಪಿಕೊಳ್ಳದೆ ಮತ್ತು ಪಶ್ಚಾತ್ತಾಪ ವ್ಯಕ್ತಪಡಿಸದೆ ಕ್ಷಮಾದಾನ ಕೋರುವುದನ್ನು ವಿರೋಧಿಸಿ ` ಕ್ಷಮೆ ಅಂದರೆ ಬನಾನಾ ರಿಪಬ್ಲಿಕ್' ಎಂಬ ಬ್ಯಾನರ್‌ನಡಿ ಪ್ರತಿಭಟನೆ ನಡೆಸಲಾಗಿದೆ. ಕೆಲವು ಪ್ರತಿಭಟನಾಕಾರರು ನೆತನ್ಯಾಹು ಅವರನ್ನು ಹೋಲುವ ಮುಖವಾಡ ಮತ್ತು ಜೈಲಿನ ಸಮವಸ್ತ್ರ ಧರಿಸಿದ್ದರೆ, ಇನ್ನು ಕೆಲವರು ಬಾಳೆಹಣ್ಣುಗಳ ರಾಶಿಯ ಹಿಂದೆ `ಕ್ಷಮೆ' ಎಂಬ ಫಲಕ ಹಿಡಿದು ನಿಂತಿದ್ದರು.
`ಅಧ್ಯಕ್ಷರ ಕೆಲಸ ಇಸ್ರೇಲ್‍ನ ಪ್ರಜಾಪ್ರಭುತ್ವವನ್ನು ರಕ್ಷಿಸುವುದು. ನೀವು ಕಾನೂನು ಮತ್ತು ಸುವ್ಯವಸ್ಥೆಯನ್ನು ನಾಶಗೊಳಿಸಿದರೆ, ಇದು ಇಸ್ರೇಲ್ ಪ್ರಜಾಪ್ರಭುತ್ವದ ಅಂತ್ಯವಾಗಲಿದೆ. ಯಾವುದೇ ಹೊಣೆಗಾರಿಕೆ ವಹಿಸದೆ, ದೇಶವನ್ನು ಹರಿದುಹಾಕಿದ್ದಕ್ಕೆ ಯಾವುದೇ ಬೆಲೆ ತೆರದೆ ತನ್ನ ವಿರುದ್ಧದ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಅವರು ಕೇಳುತ್ತಿದ್ದಾರೆ. ನೆತನ್ಯಾಹು ಅವರ ಉದ್ದೇಶ ಮತ್ತು ಅದರಿಂದ ನಮ್ಮ ದೇಶದ ಭವಿಷ್ಯದ ಮೇಲಾಗುವ ಪರಿಣಾಮಗಳನ್ನು ಇಸ್ರೇಲ್‍ನ ಜನತೆ ತಿಳಿದುಕೊಂಡಿದ್ದಾರೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆತನ್ಯಾಹು ವಿರುದ್ಧ ಮೂರು ಪ್ರತ್ಯೇಕ ಭ್ರಷ್ಟಾಚಾರದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದು ಪ್ರಕರಣದಲ್ಲಿ ನೆತನ್ಯಾಹು ಮತ್ತವರ ಪತ್ನಿ ಸಾರಾ ರಾಜಕೀಯ ಪ್ರಭಾವ ಬೀರಿದ್ದಕ್ಕೆ ಪ್ರತಿಯಾಗಿ ಕೋಟ್ಯಾಧಿಪತಿ ಉದ್ಯಮಿಯಿಂದ 2,60,000 ಡಾಲರ್ ಮೌಲ್ಯದ (ಸಿಗಾರ್, ಒಡವೆಗಳು) ಐಷಾರಾಮಿ ವಸ್ತುಗಳನ್ನು ಕೊಡುಗೆಯಾಗಿ ಸ್ವೀಕರಿಸಿದ ಆರೋಪವಿದೆ. ತನ್ನ ಪರವಾಗಿ ಹೆಚ್ಚು ವರದಿ ಪ್ರಕಟಿಸುವುದಕ್ಕೆ ಪ್ರತಿಯಾಗಿ ಇಸ್ರೇಲ್‍ನ ಎರಡು ಮಾಧ್ಯಮ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಟ್ಟಿರುವ ಪ್ರಕರಣಗಳೂ ನೆತನ್ಯಾಹು ವಿರುದ್ಧ ದಾಖಲಾಗಿವೆ.
ಒಂದು ವೇಳೆ ವಿಚಾರಣೆ ಮುಂದುವರಿದರೂ ತಾನು ಖುಲಾಸೆಗೊಳ್ಳುವ ವಿಶ್ವಾಸವಿದೆ. ಆದರೆ ದೀರ್ಘಾವಧಿಯ ಕಾನೂನು ಪ್ರಕ್ರಿಯೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಗೆ ತೊಡಕಾಗುತ್ತದೆ ಎಂದು ನೆತನ್ಯಾಹು ಅಧ್ಯಕ್ಷರಿಗೆ ಸಲ್ಲಿಸಿರುವ 111 ಪುಟಗಳ ಕ್ಷಮಾದಾನ ಕೋರಿಕೆ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಈ ಮಧ್ಯೆ, ಸರಕಾರದ ಮಿತ್ರಪಕ್ಷಗಳು, ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಮತ್ತು ವಿತ್ತ ಸಚಿವ ಬೆಝಾಲೆಲ್ ಸ್ಮೊಟ್ರಿಚ್ ಕ್ಷಮಾದಾನಕ್ಕೆ ನೆತನ್ಯಾಹು ಕೋರಿಕೆಯನ್ನು ಬೆಂಬಲಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರಾದ ನೆತನ್ಯಾಹು
ದೀರ್ಘಾವಧಿಯಿಂದ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಟೆಲ್ ಅವೀವ್‍ನ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.
ಇದಕ್ಕೂ ಮುನ್ನ, ಈ ಪ್ರಕರಣದಲ್ಲಿ ತನಗೆ ಕ್ಷಮಾದಾನ ನೀಡಬೇಕೆಂದು ನೆತನ್ಯಾಹು ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಜೋಗ್‍ಗೆ ಬರೆದಿರುವ ಪತ್ರದಲ್ಲಿ ವಿನಂತಿಸಿಕೊಂಡಿದ್ದರು. ಇಸ್ರೇಲ್‍ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿಯಾಗಿರುವ ನೆತನ್ಯಾಹು ವಿರುದ್ಧ ಲಂಚ, ವಂಚನೆ ಮತ್ತು ವಿಶ್ವಾಸ ದ್ರೋಹದ ಆರೋಪದ ಮೇಲೆ 2019ರಲ್ಲಿ ದೋಷಾರೋಪಣೆ ಮಾಡಲಾಗಿದ್ದು 2020ರಲ್ಲಿ ವಿಚಾರಣೆ ಪ್ರಾರಂಭಗೊಂಡಿದೆ.
ಸೋಮವಾರ ಟೆಲ್ ಅವೀವ್‍ನ ನ್ಯಾಯಾಲಯದ ಎದುರು ಸೇರಿದ ಪ್ರತಿಭಟನಾಕಾರರ ಗುಂಪು ಜೈಲಿನ ಸಮವಸ್ತ್ರವನ್ನು ಹೋಲುವ ಕಿತ್ತಳೆ ಬಣ್ಣದ ದಿರಿಸನ್ನು ಧರಿಸಿ ಪ್ರತಿಭಟನೆ ನಡೆಸಿದರು ಮತ್ತು ನೆತನ್ಯಾಹು ಜೈಲಿಗೆ ಹೋಗಬೇಕೆಂದು ಘೋಷಣೆ ಕೂಗಿದರು. ನೆತನ್ಯಾಹು ತಪ್ಪಿತಸ್ಥರೆಂದು ಒಪ್ಪಿಕೊಳ್ಳದೆ ಅಥವಾ ಯಾವುದೇ ಜವಾಬ್ದಾರಿ ವಹಿಸಿಕೊಳ್ಳದೆ ಕ್ಷಮಾದಾನ ಕೋರುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿರುವುದಾಗಿ ವರದಿಯಾಗಿದೆ.
ತಪ್ಪೊಪ್ಪಿಕೊಂಡು, ಪದತ್ಯಾಗ ಮಾಡಿದರೆ ಮಾತ್ರ ನೆತನ್ಯಾಹುಗೆ ಕ್ಷಮಾದಾನ: ವಿಪಕ್ಷಗಳ ಆಗ್ರಹ
ಭ್ರಷ್ಟಾಚಾರ ಪ್ರಕರಣದಲ್ಲಿ ಕ್ಷಮಾದಾನ ಕೋರಿ ಅಧ್ಯಕ್ಷರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಲ್ಲಿಸಿರುವ ಕೋರಿಕೆಗೆ ವಿರೋಧ ಪಕ್ಷಗಳು ಆಕ್ಷೇಪಿಸಿವೆ.
ತಪ್ಪನ್ನು ಒಪ್ಪಿಕೊಳ್ಳದೆ, ಪಶ್ಚಾತ್ತಾಪ ವ್ಯಕ್ತಪಡಿಸದೆ ಮತ್ತು ತಕ್ಷಣವೇ ರಾಜಕೀಯ ಜೀವನದಿಂದ ನಿವೃತ್ತಿ ಹೊಂದದೆ ನೆತನ್ಯಾಹುರನ್ನು ಕ್ಷಮಿಸಬಾರದು ಎಂದು ವಿಪಕ್ಷ ನಾಯಕ ಯಾಯಿರ್ ಲ್ಯಾಪಿಡ್ ಒತ್ತಾಯಿಸಿದ್ದಾರೆ. ಅಧ್ಯಕ್ಷರು ಕ್ಷಮಾದಾನ ನೀಡಬಾರದು. ತಪ್ಪಿತಸ್ಥರು ಮಾತ್ರ ಕ್ಷಮೆ ಯಾಚಿಸುತ್ತಾರೆ. ಪ್ರಧಾನಿ ತಕ್ಷಣ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷದ ಮತ್ತೊಬ್ಬ ನಾಯಕ ಯಾಯಿರ್ ಗೊಲಾನ್ ಆಗ್ರಹಿಸಿದ್ದಾರೆ. ವಂಚನೆ ಮತ್ತು ವಿಶ್ವಾಸ ದ್ರೋಹದಂತಹ ಗಂಭೀರ ಅಪರಾಧಗಳ ಆರೋಪಿ ಪ್ರಧಾನಿಗೆ ಕ್ಷಮಾದಾನ ನೀಡುವುದು `ಕೆಲವರು ಕಾನೂನಿಗಿಂತ ಮೇಲೆ ಇರುತ್ತಾರೆ' ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದು `ಗುಣಮಟ್ಟದ ಆಡಳಿತಕ್ಕೆ ಅಭಿಯಾನ' ಪ್ರತಿಪಾದಿಸಿದೆ.




