ಕಾಸರಗೋಡು: ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಬಗ್ಗೆ ರಾಜ್ಯದಲ್ಲಿ ಅದಲುಬದಲಾಗಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯಧೋರಣೆ ಪ್ರತಿಭಟಿಸಲು ಹಾಗೂ ಜಿಲ್ಲೆಯ ಹೆಸರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ(ಏಮ್ಸ್)ಕೇಂದ್ರ ಮಂಜೂರುಗೊಳಿಸುವ ಪಟ್ಟಿಯಲ್ಲಿ ಒಳಪಡಿಸುವಂತೆ ಆಗ್ರಹಿಸಿ ಏಮ್ಸ್ ಜನಪರ ಒಕ್ಕೂಟ ವತಿಯಿಂದ ಒಂದು ದಿನದ ಪಾದಯಾತ್ರೆ ಕಾಸರಗೋಡಿನಿಂದ ಕಾಞಂಗಾಡು ವರೆಗೆ ನಡೆಯಿತು.
ದೀರ್ಘ ಕಾಲದಿಂದ ಸಲ್ಲಿಸುತ್ತಿರುವ ಮನವಿಯನ್ನು ಪರಿಗಣಿಸದೆ, ಜಿಲ್ಲೆಯ ಜನತೆಯ ಬೇಡಿಕೆ ಈಡೇರಿಸದ ಸರ್ಕಾರದ ಧೋರಣೆ ಖಂಡಿಸಿ, ಸಾಂಕೇತಿಕವಾಗಿ ಕತ್ತೆಯೊಂದಿಗೆ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಸರಗೋಡಿನಿಂದ ಆರಂಭಗೊಂಡ ಕತ್ತೆಯೊಂದಿಗೆ ನಡಿಗೆಯ ಪ್ರತಿಭಟನಾ ಜಾಥಾ ಮೇಲ್ಪರಂಬ, ಉದುಮ, ಬೇಕಲ್, ಪಾಲಕುನ್ನು, ಪಳ್ಳಿಕೆರೆ ಮೂಲಕ ಸಾಗಿ ಕಾಞಂಗಾಡಿನ ಹಳೇ ಬಸ್ ನಿಲ್ದಾಣದ ಸನಿಹ ಸಂಪನ್ನಗೊಂಡಿತು.
ರಾಜಕೀಯ ನಾಯಕರು ಜನರ ಬೇಡಿಕೆ ಬಗ್ಗೆ ಸ್ಪಂದನೆ ಪ್ರದರ್ಶಿಸಲು ಚುನಾವಣೆಗಳನ್ನು ಒಂದು ಅವಕಾಶವಾಗಿ ಕೈಗೆತ್ತಿಕೊಂಡು ಕಾರ್ಯಸಾಧನೆಗೆ ಮುಂದಾಗಬೇಕು ಎಂಬುದಾಗಿ ಸಮಿತಿ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಜಾಥಾದಲ್ಲಿ ಪಾಲ್ಗೊಂಡವರು 'ಏಮ್ಸ್‍ಗೆ ಮತ", ಜಿಲ್ಲೆಗೊಂದು ಏಮ್ಸ್ ಮಂಜೂರುಗೊಳಿಸಿ, ನಾವು ಕತ್ತೆಗಳಲ್ಲ, ಏಮ್ಸ್‍ಗಾಗಿಒಮದು ಮತ ಎಂಬ ಘೋಷಣೆಯುಳ್ಳ ಭಿತ್ತಿಪತ್ರ ಪ್ರದರ್ಶಿಸಿದರು.
ಖ್ಯಾತ ಕವಿ ಪ್ರೇಮಚಂದ್ರನ್ ಚೆಂಬೋಳಂ ಪಾದಯಾತ್ರೆ ಉದ್ಘಾಟಿಸಿದರು. ಏಮ್ಸ್ ಜನಪರ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಸಂಚಾಲಕ ಶ್ರೀನಾಥ್ ಶಶಿ ಸ್ವಾಗತಿಸಿದರು.

