ಮಧೂರು: ಜಿಲ್ಲೆಯ ಐದು ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದರಲ್ಲಿ ಮಧೂರು ಗ್ರಾಮ ಪಂಚಾಯಿತಿ ಹ್ಯಾಟ್ರಿಕ್ ಐವತ್ತನೇ ವರ್ಷಕ್ಕೆ ಧಾಪುಗಾಲಿಡುತ್ತಿದೆ. 45 ವರ್ಷಗಳ ನಿರಂತರ ಆಡಳಿತವನ್ನು ಪೂರ್ಣಗೊಳಿಸಿ 50 ನೇ ವರ್ಷಕ್ಕೆ ಕಾಲಿಡುವ ಮೂಲಕ ಮಧೂರು ಗ್ರಾಮ ಪಂಚಾಯಿತಿ ಕೇರಳ ರಾಜ್ಯದಲ್ಲಿ ಗಮನಸೆಳೆದಿದೆ. ಪಕ್ಷದ ಹಿರಿಯ ಸದಸ್ಯೆ, ಈ ಹಿಂದೆ ಗ್ರಾಪಂ ಉಪಾಧ್ಯಕ್ಷೆಯಾಗಿ ಕರ್ತವ್ಯನಿರ್ವಹಿಸಿ ಅನುಭವ ಹೊಂದಿರುವ ಸುಜ್ಞಾನಿ ಶ್ಯಾನ್‍ಭಾಗ್ ಅವರನ್ನು ಅಧ್ಯಕ್ಷೆಯನ್ನಾಗಿ ಹಾಗೂ ಭಾನುಪ್ರಕಾಶ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಒಟ್ಟು 24ಸದಸ್ಯ ಬಲದ ಗ್ರಾಮ ಪಮಚಾಯಿತಿಯಲ್ಲಿ ಹದಿನೈದು ಬಿಜೆಪಿ ಹಾಗೂ ಒಂಬತ್ತು ಮಂದಿ ಐಕ್ಯರಂಗ ಸದಸ್ಯರಿದ್ದಾರೆ. ಬದಿಯಡ್ಕ, ಕುಂಬ್ಡಾಜೆ, ಕಾರಡ್ಕ ಹಾಗೂ ಬೆಳ್ಳೂರು ಪಂಚಾಯಿತಿಯಲ್ಲೂ ಈ ಬಾರಿ ಬಿಜೆಪಿ ಅಧಿಕಾರಕ್ಕೇರಿದೆ.
ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಕಾರ್ಯಕರ್ತರ ಶ್ರಮ ಮಹತ್ವದ್ದಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಜನಪರ ಯೋಜನೆಗಳು ಗ್ರಾಮೀಣ ಮಟ್ಟಕ್ಕೆ ಸಮರ್ಪಕವಾಗಿ ತಲುಪಲು ಬಿಜೆಪಿ ಆಡಳಿತ ಪ್ರಾದೇಶಿಕವಾಗಿ ಆಡಳಿತಕ್ಕೇರುವುದು ಅನಿವಾರ್ಯ ಎಂಬುದು ಜನತೆಗೆ ಅರಿವಾಗಿದೆ.
ಐದು ಪಚಾಯಿತಿಗಳಲ್ಲಿ ಬಿಜೆಪಿಗೆ ಲಭಿಸಿರುವ ಆಡಳಿತ, ಕಾಸರಗೋಡು ತಾಲೂಕಿನಲ್ಲಿ ಪಕ್ಷದ ಬಲವರ್ಧನೆಯನ್ನು ಸೂಚಿಸುತ್ತದೆ. ಜನಪ್ರತಿನಿಧಿಗಳು ಜನರ ತುಡಿತಗಳಿಗೆ ಸ್ಪಂದಿಸುವ ಮೂಲಕ ಅವರ ಆಶೋತ್ತರ ಪೂರೈಸಲು ಬದ್ಧರಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


