ನವದೆಹಲಿ: ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ಈಗಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಎಐಸಿಟಿಇಯನ್ನು ಬದಲಾಯಿಸಿ ಏಕೀಕೃತ ವ್ಯವಸ್ಥೆಯನ್ನು ರೂಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
ಈ ಹಿಂದೆ ಭಾರತ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ಎಂದು ನಾಮಕರಣ ಮಾಡಿದ್ದ ಪ್ರಸ್ತಾವಿತ ಮಸೂದೆಗೆ 'ವಿಕಸಿತ ಭಾರತ್ ಶಿಕ್ಷಾ ಅಧಿಕ್ಷಣ್' (ವಿಬಿಎಸ್‌ಎ) ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಉನ್ನತ ಶಿಕ್ಷಣ ನಿಯಂತ್ರಣವನ್ನು ಏಕೀಕೃತ ವ್ಯವಸ್ಥೆಗೆ ತರಲು ಪ್ರಸ್ತಾವಿಸಲಾಗಿತ್ತು. ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹಾಗೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆಯೂ(ಎನ್‌ಸಿಟಿಇ) ವಿಬಿಎಸ್‌ಎನಲ್ಲಿ ವಿಲೀನವಾಗಲಿವೆ.
'ವಿಕಸಿತ ಭಾರತ್ ಶಿಕ್ಷಾ ಅಧಿಕ್ಷಣ್' ಮಸೂದೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಜಿಸಿಯು ತಾಂತ್ರಿಕೇತರ ಉನ್ನತ ಶಿಕ್ಷಣವನ್ನು ನೋಡಿಕೊಳ್ಳುತ್ತಿದೆ. ಎಐಸಿಟಿಇಯು ತಾಂತ್ರಿಕ ಶಿಕ್ಷಣದ ಮೇಲುಸ್ತುವಾರಿ ವಹಿಸಿದ್ದರೆ, ಎನ್‌ಸಿಟಿಯು ಶಿಕ್ಷಕರ ಶಿಕ್ಷಣದ ವಿಚಾರದ ಮೇಲೆ ನಿಗಾ ವಹಿಸಿದೆ.
ಆಯೋಗವು ಉನ್ನತ ಶಿಕ್ಷಣದ ಏಕೀಕೃತ ನಿಯಂತ್ರಣ ವ್ಯವಸ್ಥೆಗೆ ಶಿಫಾರಸು ಮಾಡಿತ್ತು. ಆದರೆ, ವೈದ್ಯಕೀಯ ಹಾಗೂ ಕಾನೂನು ಶಿಕ್ಷಣವನ್ನು ಇದರ ಅಡಿಗೆ ತರುವ ಉದ್ದೇಶ ಹೊಂದಿಲ್ಲ. ನೂತನ ವ್ಯವಸ್ಥೆಯು ನಿಯಂತ್ರಣ, ಮಾನ್ಯತೆ ಹಾಗೂ ವೃತ್ತಿಪರ ಮಾನದಂಡವನ್ನು ನಿಗದಿಪಡಿಸುವ ಗುರಿ ಹೊಂದಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿತ್ತು.
ನಾಗರಿಕ ಪರಮಾಣು ಇಂಧನ ಕ್ಷೇತ್ರ; ಖಾಸಗಿ ಸಹಭಾಗಿತ್ವಕ್ಕೆ ಮುಕ್ತ
ನವದೆಹಲಿ: 2047ರ ವೇಳೆಗೆ 100 ಗಿಗಾವ್ಯಾಟ್ ಅಣುಶಕ್ತಿ ಉತ್ಪಾದನೆ ಗುರಿ ತಲುಪುವ ನಿಟ್ಟಿನಲ್ಲಿ ನಾಗರಿಕ ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವಕ್ಕೆ ಮುಕ್ತಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ಒಪ್ಪಿಗೆ ನೀಡಿದೆ.
ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಹಾಗೂ ಪ್ರಗತಿ ನಿಟ್ಟಿನಲ್ಲಿ ಭಾರತ ಪರಿವರ್ತನೆ (ಶಾಂತಿ) ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕಳೆದ ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಾಸಗಿ ಸಹಭಾಗಿತ್ವದಲ್ಲಿ ಪರಮಾಣು ಇಂಧನ ಕೇಂದ್ರ ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಘೋಷಣೆ ಮಾಡಿದ್ದರು.
ಸಣ್ಣ ಮಾಡ್ಯುಲರ್ ಪರಮಾಣು ಸ್ಥಾವರಗಳ (ಎಸ್‌ಎಂಆರ್) ಅಭಿವೃದ್ಧಿ ಹಾಗೂ ಸಂಶೋಧನೆಗಾಗಿ ₹ 20 ಸಾವಿರ ಕೋಟಿ ಮೊತ್ತದ ಯೋಜನೆಯನ್ನು ಈ ವೇಳೆ ಘೋಷಿಸಿದ್ದರು. ಖಾಸಗಿಯವರ ಸಹಭಾಗಿತ್ವದಲ್ಲಿ ದೇಶೀಯವಾಗಿ 2033ರ ವೇಳೆಗೆ ಇಂತಹ ಐದು ಸ್ಥಾವರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಅವರು ಹೇಳಿದ್ದರು.

