HEALTH TIPS

ವಂದೇ ಮಾತರಂ, ಚುನಾವಣಾ ವ್ಯವಸ್ಥೆ ಕುರಿತ ಚರ್ಚೆ; ಸರ್ಕಾರ ಒತ್ತಡದಲ್ಲಿದೆ: ರಾಹುಲ್

ನವದೆಹಲಿ: ವಂದೇ ಮಾತರಂ ಮತ್ತು ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಸಂಸದರು ತೋರಿದ ಕಾರ್ಯವೈಖರಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶ್ಲಾಘಿಸಿದರು.

ಶುಕ್ರವಾರ ನಡೆದ ಕಾಂಗ್ರೆಸ್‌ನ ಲೋಕಸಭಾ ಸದಸ್ಯರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಅವರು ಸಂಸದರ ಅಭಿಪ್ರಾಯಗಳನ್ನು ಆಲಿಸಿದರು.

ಚರ್ಚೆಗೆ ಕೈಗೆತ್ತಿಕೊಂಡ ಎರಡೂ ವಿಷಯಗಳಲ್ಲಿ ಸರ್ಕಾರವು ಪ್ರತಿಪಕ್ಷಗಳಿಂದ 'ಒತ್ತಡಕ್ಕೆ ಸಿಲುಕಿದೆ' ಎಂದು ರಾಹುಲ್‌ ಅವರು ಸಭೆಯಲ್ಲಿ ಪಕ್ಷದ ಸಂಸದರಿಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸಂಸತ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಂದೇ ಮಾತರಂ ಮತ್ತು ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಕುರಿತು ಕಾವೇರಿದ ಚರ್ಚೆ ನಡೆಯಿತು. ಎರಡೂ ಚರ್ಚೆಗಳಲ್ಲಿ ನಾವು ಅವರ (ಸರ್ಕಾರದ) ಸಂಕಥನವನ್ನು ಪುಡಿಗಟ್ಟಿದ್ದೇವೆ' ಎಂದರು.

ಎಸ್‌ಐಆರ್ ಚರ್ಚೆಯ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೊಂದಲಕ್ಕೀಡಾಗಿದ್ದರಲ್ಲದೆ, ಸಂಸತ್ತಿನಲ್ಲಿ ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂದು ಟೀಕಿಸಿದರು.

'ಇಡೀ ವ್ಯವಸ್ಥೆಯು ಮತಕಳವಿನಲ್ಲಿ ತೊಡಗಿಕೊಂಡಿದೆ. ಈ ವಿಷಯ ಇದೀಗ ದೇಶದ ಎಲ್ಲರಿಗೂ ತಿಳಿದಿದೆ. ಇದೇ ಕಾರಣದಿಂದ ಅಮಿತ್‌ ಶಾ ಅವರು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದ್ದರು' ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಮಾತನಾಡಿ, 'ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ, ವಾಯು ಮಾಲಿನ್ಯ ಮತ್ತು ಕಾರ್ಮಿಕ ಸಂಹಿತೆಯಂತಹ ಪ್ರಸ್ತುತ ವಿಷಯಗಳನ್ನು ಸಂಸತ್ತಿನಲ್ಲಿ ಎತ್ತುವಲ್ಲಿ ಪಕ್ಷವು ಯಶಸ್ವಿಯಾಗಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು' ಎಂದು ಹೇಳಿದರು.

ವಾಯುಮಾಲಿನ್ಯ: ಚರ್ಚೆಗೆ ಆಗ್ರಹ

ದೇಶದಾದ್ಯಂತ ಪ್ರಮುಖ ನಗರಗಳನ್ನು ವಿಷಪೂರಿತ ಗಾಳಿಯು ಆವರಿಸಿಕೊಂಡಿದೆ ಎಂದು ಹೇಳಿರುವ ರಾಹುಲ್ ಗಾಂಧಿ ವಾಯುಮಾಲಿನ್ಯ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳು ಪರಸ್ಪರ ಮಾತಿನ ಚಕಮಕಿ ನಡೆಸುವ ಬದಲು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಚರ್ಚೆಯನ್ನು ರೂಪಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

'ನಾವು ಈ ಗಂಭೀರ ವಿಷಯದ ಬಗ್ಗೆ ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ನಡೆಸಬೇಕು. ಪ್ರತಿ ನಗರದಲ್ಲೂ ಮುಂದಿನ 5 ಅಥವಾ 10 ವರ್ಷಗಳಲ್ಲಿ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವಂತಹ ವಾತಾವರಣ ನಿರ್ಮಿಸಲು ವ್ಯವಸ್ಥಿತ ಯೋಜನೆಯನ್ನು ಜಾರಿಗೆ ತರಬೇಕು' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ. ಲೋಕಸಭೆಯ ಕಲಾಪ ಸಲಹಾ ಸಮಿತಿಯು ಚರ್ಚೆಗೆ ಸಮಯವನ್ನು ನಿಗದಿಪಡಿಸಬಹುದು ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries