ನವದೆಹಲಿ: ನವದೆಹಲಿ-ಮುಂಬೈ ಮತ್ತು ನವದೆಹಲಿ-ಹೌರಾ ನಡುವಿನ ರೈಲು ಮಾರ್ಗಗಳಲ್ಲಿ ಪ್ರಸಕ್ತ ಸಾಲಿನ ಡಿಸೆಂಬರ್ ಒಳಗಾಗಿ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ 'ಕವಚ್' ಅನ್ನು ಅಳವಡಿಸಲು ರೈಲ್ವೆ ಸಚಿವಾಲಯ ವಿಫಲವಾಗಿದ್ದು, 2026ರ ವೇಳೆ ಈ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
'ಕಚವ್' ಅಳವಡಿಕೆಯ ಶೇ 25ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಬಹುತೇಕ ಬಿಡಿಭಾಗಗಳು ಮತ್ತು ಉಪಕರಣಗಳನ್ನು ತಂದಿರಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ-ಮುಂಬೈ-ಹೌರಾ ಮಾರ್ಗಗಳಲ್ಲಿ 'ಕವಚ್' ಅಳವಡಿಕೆ ಕಾರ್ಯ 2025 ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಸಚಿವಾಲಯವು 2024 ಆಗಸ್ಟ್‌ನಲ್ಲಿ ತಿಳಿಸಿತ್ತು. ಬಳಿಕ ಈ ಗಡುವನ್ನು ಡಿಸೆಂಬರ್‌ಗೆ ವಿಸ್ತರಿಸಿತ್ತು. ಆದರೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ.
'ಕವಚ್' ದೇಶಿ ನಿರ್ಮಿತ ಸುರಕ್ಷತಾ ವ್ಯವಸ್ಥೆಯಾಗಿದ್ದು, ಉನ್ನತ ತಂತ್ರಜ್ಞಾನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ರೈಲಿನ ಬ್ರೇಕ್ ಹಾಕಲು ಲೋಕೊ ಪೈಲಟ್ ವಿಫಲವಾದರೆ ಸ್ವಯಂಚಾಲಿತ ಬ್ರೇಕ್ ಕಾರ್ಯನಿರ್ವಹಿಸಿ ರೈಲು ನಿಗದಿತ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ.

