ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮ ಪಂಚಾಯತಿಳಲ್ಲಿ ಚುನಾಯಿತರಾದವರ ಪೈಕಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಇಂದು(ಶನಿವಾರ) ನಡೆಯಲಿರುವಂತೆಯೇ ಬಹುತೇಕ ಮಂದಿಯ ಗಮನ ಬದಿಯಡ್ಕ ಗ್ರಾಮ ಪಂಚಾಯತಿಯತ್ತ ಹರಿದಿದೆ. ಪ್ರಸ್ತುತ ಪಂಚಾಯತಿಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವ ಪಕ್ಷದಿಂದ ಆಯ್ಕೆಗೊಳ್ಳುವರು ಎಂದು ತಿಳಿಯಲು ಮತದಾರರು ಕಾತರದಿಂದ ಕಾದು ನಿಂತಿದ್ದಾರೆ.
ಒಟ್ಟು 21 ವಾರ್ಡ್‍ಗಳಿರುವ ಬದಿಯಡ್ಕ ಪಂಚಾಯತಿಯಲ್ಲಿ ಬಿಜೆಪಿ ಹಾಗೂ ಯುಡಿಎಫ್‍ಗೆ ತಲಾ 10 ಸೀಟುಗಳೊಂದಿಗೆ ಸಮಬಲದಲ್ಲಿದ್ದರೆ, ಸಿಪಿಎಂಗೆ ಒಂದು ಸೀಟು ಲಭಿಸಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಬೇಕಾದರೆ ಇಲ್ಲಿ 11 ಸೀಟುಗಳ ಅಗತ್ಯವಿದೆ. ಹಾಗಿರುವಾಗ ಸಿಪಿಎಂನ ಓರ್ವ ಸದಸ್ಯೆ ಕೈಗೊಳ್ಳುವ ನಿರ್ಧಾರ ನಿರ್ಣಾಯಕವಾಗಿರಲಿದೆ. ಇದೇ ವೇಳೆ ಬಿಜೆಪಿಗೋ, ಐಕ್ಯರಂಗಕ್ಕೋ ಬೆಂಬಲ ನೀಡುವಂತಿಲ್ಲವೆಂದು ಸಿಪಿಎಂ ಈಗಾಗಲೇ ನಿರ್ಧಾರ ಕೈಗೊಂಡಿದೆ. ಕೇರಳದಲ್ಲಿ ಯುಡಿಎಫ್ ಹಾಗೂ ಬಿಜೆಪಿ ಬದ್ಧಶತ್ರುಗಳಾಗಿರುವುದರಿಂದ ಈ ಎರಡೂ ಪಕ್ಷಗಳಿಗೆ ಸಿಪಿಎಂನ ಬೆಂಬಲ ಲಭಿಸದು ಎಂಬುವುದು ಬಹುತೇಕ ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಮತದಾನ ವೇಳೆ ಸಿಪಿಎಂ ತಟಸ್ಥ ನಿಲುವು ಕೈಗೊಂಡಲ್ಲಿ ಯುಡಿಎಫ್ ಹಾಗೂ ಬಿಜೆಪಿಗೆ ಸಮಾನ ಸೀಟುಗಳು ಲಭಿಸಲಿವೆ. ಆದ್ದರಿಂದ ಅಧ್ಯಕ್ಷರನ್ನು ಚೀಟಿ ಎತ್ತುವ ಮೂಲಕವೇ ನಿರ್ಧರಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ. ಹಾಗಾದಲ್ಲಿ ಅದೃಷ್ಟ ಯಾರ ಪಾಲಿಗಾಗಿರುವುದು ಎಂಬುವುದನ್ನು ಕಾದುನಿಂತು ನೋಡಬೇಕಾಗಿದೆ.
ಕಳೆದ ಆಡಳಿತ ಸಮಿತಿಯಲ್ಲಿ ಒಟ್ಟು 19 ಸೀಟುಗಳ ಪೈಕಿ ಬಿಜೆಪಿಗೆ 8, ಯುಡಿಎಫ್‍ಗೆ 8, ಎಲ್‍ಡಿಎಫ್‍ಗೆ 3 ಸೀಟುಗಳು ಲಭಿಸಿತ್ತು. ಎಲ್‍ಡಿಎಫ್‍ನ ಮೂವರು ಸದಸ್ಯರು ಮತದಾನದಿಂದ ದೂರ ಉಳಿದ ಹಿನ್ನೆಲೆಯಲ್ಲಿ ನಡೆದ ಚೀಟಿ ಎತ್ತುವಿಕೆಯಲ್ಲಿ ಯುಡಿಎಫ್‍ಗೆ ಆಡಳಿತ ಲಭಿಸಿತ್ತು. ಈ ಬಾರಿಯೂ ಅದುವೇ ಉಂಟಾಗಲಿದೆಯೆಂದು ಯುಡಿಎಫ್ ಭಾವಿಸುತ್ತಿರುವಾಗ ಈ ಬಾರಿ ಅದೃಷ್ಟ ನಮ್ಮ ಪಾಲಿಗೆ ಲಭಿಸಲಿದೆಯೆಂದು ಬಿಜೆಪಿ ನಿರೀಕ್ಷೆಯಿರಿಸಿದೆ.
ಇದೇ ವೇಳೆ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯ 2ನೇ ವಾರ್ಡ್ ಕಿಳಿಂಗಾರಿನಿಂದ ಗೆಲುವು ಸಾಧಿಸಿದ ಡಿ. ಶಂಕರರನ್ನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡ್ ನಿಂದ ಚುನಾಯಿತರಾದ ಅಶ್ವಿನಿ ಕೆ.ಎಂ ಅವರನ್ನು ನಿರ್ಧರಿಸಲಾಗಿದೆ. ಆದರೆ ಯುಡಿಎಫ್‍ನಿಂದ ಅಧ್ಯಕ್ಷ, ಉಫಾಧ್ಯಕ್ಷ ಅಭ್ಯರ್ಥಿಗಳು ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಮುಸ್ಲಿಂ ಲೀಗ್ ಅಧ್ಯಕ್ಷ ಸ್ಥಾನಕ್ಕೆ ಹಕ್ಕು ಮಂಡಿಸುತ್ತಿದೆಯೆಂದೂ ಆದರೆ ಈಬಾರಿ ಅಧ್ಯಕ್ಷ ಸ್ಥಾನ ತಮಗೆ ನೀಡಬೇಕೆಂಬುವುದು ಕಾಂಗ್ರೆಸ್‍ನ ಬೇಡಿಕೆಯಾಗಿದೆ. ಇದುವೇ ಅಧ್ಯಕ್ಷ ಅಭ್ಯರ್ಥಿಯ ನಿರ್ಣಯ ವಿಳಂಬಕ್ಕೆ ಕಾರಣವಾಗಿದೆ.


