ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇದೇ ಮೊದಲ ಬಾರಿಗೆ ಮೊಗ್ರಾಲ್‍ಪುತ್ತೂರು ಸರ್ಕಾರಿಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿ.29ರಿಂದ 31ರ ವರೆಗೆ ಜರುಗಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಶಾಲಾ ಹಳೇ ವಿದ್ಯಾರ್ಥಿಗಳ ಸಂಘ ಕೈಜೋಡಿಸಿದೆ. ಶಾಲಾ ಕಲೋತ್ಸವನ್ನು ವೈಭವೋಪೇತವಾಗಿ ನಡೆಸುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಈಗಾಗಲೇ ಸಭೆ ನಡೆಸಿದ್ದು, ಚಟುವಟಿಕೆನಿರತವಾಗಿದೆ. 1989-1990ನೇ ಸಾಲಿನ ಎಸ್ಸೆಸೆಲ್ಸಿ ಬ್ಯಾಚ್‍ನ ವಿದ್ಯಾರ್ಥಿಗಳು ತಮ್ಮ ಮೊದಲ ಹಂತದಲ್ಲಿ55555ರೂ. ಮೊತ್ತದ ಸಹಾಯಧನದ ಚೆಕ್ಕನ್ನು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ವಿ. ಮಧುಸೂಧನನ್ ಅವರಿಗೆ ಹಸ್ತಾಂತರಿಸಿದ್ದಾರೆ.
ಮೊಗ್ರಾಲ್ ಹಲವು ಮಂದಿ ಕವಿಗಳು, ಕ್ರೀಡಾ ಹಾಗೂ ಕಲಾ ಪ್ರತಿಭೆಗಳ ತವರೂರಾಗಿದ್ದು, 'ಇಶಲ್ ಗ್ರಾಮ'ಎಂದೇ ಪ್ರಸಿದ್ಧಿ ಪಡೆದಿದೆ. ಜಿಲ್ಲಾ ಶಾಲಾ ಕಲೋತ್ಸವ ಅಂಗವಾಗಿ ಈಗಾಗಲೇ ವೇದಿಕೇತರ ಸ್ಪರ್ಧೆಗಳು ಇಲ್ಲಿಪೂರ್ಣಗೊಂಡಿದ್ದು, ಡಿ. 29ರಂದು ಆರಂಭಗೊಳ್ಳುವ ಕಲೋತ್ಸವದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

