ಕಾಸರಗೋಡು: ನಗರದ ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ರಸ್ತೆಯನ್ನು ದುರಸ್ತಿ ಮಾಡದ ಪಿಣರಾಯಿ ಸರ್ಕಾರದ ನಿರ್ಲಕ್ಷ್ಯಧೋರಣೆ ಖಂಡಿಸಿ ಯುವ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರಸಕ್ತ ರಸ್ತೆಯ ಶಿಥಿಲಾವಸ್ಥೆಯಿಂದ ರೋಸಿಹೋದ ಜನತೆ ಕಾಸರಗೋಡು ತಾಲೂಕು ಕಚೇರಿ ಎದುರಿನ ರಸ್ತೆಯಲ್ಲೇ ಕುಳಿತು ತಮ್ಮ ಪ್ರತಿಭಟನೆಯನ್ನು ನಡೆಸಿದರು. ರಸ್ತೆಯ ದುಸ್ಥಿತಿಯಿಂದಾಗಿ ವಾಹನಗಳು ವ್ಯಾಪಕವಾಗಿ ಜಖಂಗೊಳ್ಳಲಾರಂಭಿಸಿದ್ದು, ಪ್ರಯಾಣಿಕರಲ್ಲಿ ಎದೆನೋವು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗತೊಡಗಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಪ್ರತಿಭಟನಾಕಾರರು ದೂರಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕೊಲ್ಲಾಲಯಿಲ್ ಅಶ್ವಿನ್ ಧರಣಿ ಉದ್ಘಾಟಿಸಿದರು.
ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಗೋಕುಲ್ ದಾಸ್ ತ್ರಿಕರಿಪುರ, ಪ್ರದೀಪ್ ತಾಳಿಪಡ್ಪು, ಪ್ರಜ್ವಲ್ ಕೇಳುಗುಡ್ಡೆ, ಶಿವದೀಪ್ ಬೀರಂತಬೈಲ್, ಅಜಿತ್ ಕಡಪ್ಪುರ, ಗಣೇಶ್ ಕಡಪ್ಪುರ ನೇತೃತ್ವ ವಹಿಸಿದ್ದರು.




