HEALTH TIPS

ಹೊಸ ಗಣಿಗಾರಿಕೆಗೆ ನಿಷೇಧ, ಸಂರಕ್ಷಿತ ವಲಯದ ವಿಸ್ತರಣೆ: ಅರಾವಳಿ ರಕ್ಷಣೆಗಾಗಿ ಕೇಂದ್ರದ ಯೋಜನೆ

ನವದೆಹಲಿ: ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನದ ಕುರಿತು ಇತ್ತೀಚಿಗೆ ಪ್ರಕಟಿಸಲಾದ ಹೊಸ ನಿಯಮಗಳ ಕುರಿತು ವಿವಾದದ ನಡುವೆಯೇ ಅರಾವಳಿ ಪರ್ವತ ಶ್ರೇಣಿಯ ಸಂರಕ್ಷಣೆಗಾಗಿ ಮಹತ್ವದ ಕ್ರಮವೊಂದರಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ಅರಾವಳಿಯಾದ್ಯಂತ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಸರ್ವೋಚ್ಚ ನ್ಯಾಯಾಲಯವು ಸುಸ್ಥಿರ ಗಣಿಗಾರಿಕೆಗಾಗಿ ಸಮಗ್ರ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವವರೆಗೆ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ಸ್ಥಗಿತಗೊಳಿಸಿದ ಕೆಲವು ದಿನಗಳ ಬಳಿಕ ಸರಕಾರದ ಈ ಆದೇಶವು ಹೊರಬಿದ್ದಿದೆ.

ನಿಷೇಧವು ಗುಜರಾತಿನಿಂದ ದಿಲ್ಲಿವರೆಗಿನ ಇಡೀ ಅರಾವಳಿ ಪ್ರದೇಶದಾದ್ಯಂತ ಏಕರೂಪವಾಗಿ ಅನ್ವಯಿಸಲಿದ್ದು, ಅರಾವಳಿ ಶ್ರೇಣಿಯನ್ನು ನಿರಂತರ ಭೂವೈಜ್ಞಾನಿಕ ಪರ್ವತ ಶ್ರೇಣಿಯನ್ನಾಗಿ ಸಂರಕ್ಷಿಸುವ ಹಾಗೂ ಎಲ್ಲ ಕಾನೂನುಬಾಹಿರ ಮತ್ತು ಅನಿಯಂತ್ರಿತ ಗಣಿಗಾರಿಕೆ ಚಟುವಟಿಕೆಗಳಿಗೆ ಕಡಿವಾಣವನ್ನು ಹಾಕುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರವು ಈಗಾಗಲೇ ನಿಷೇಧಿಸಿರುವ ವಲಯಗಳಾಚೆ ಗಣಿಗಾರಿಕೆಯನ್ನು ನಿಷೇಧಿಸಬೇಕಾದ ಅರಾವಳಿಯಾದ್ಯಂತದ ಹೆಚ್ಚುವರಿ ಪ್ರದೇಶಗಳನ್ನು ಗುರುತಿಸುವಂತೆ ಸಚಿವಾಲಯವು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೂ (ICFRE) ಸೂಚಿಸಿದೆ.

ಇಡೀ ಅರಾವಳಿ ಪ್ರದೇಶಕ್ಕಾಗಿ ಸಮಗ್ರ, ವಿಜ್ಞಾನ ಆಧಾರಿತ ಸುಸ್ಥಿರ ಗಣಿಗಾರಿಕೆ ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸುವಾಗ ಗಣಿಗಾರಿಕೆ ನಿಷೇಧಕ್ಕಾಗಿ ಹೆಚ್ಚುವರಿ ಪ್ರದೇಶಗಳನ್ನು ಗುರುತಿಸುವಂತೆ ICFREಗೆ ಸೂಚಿಸಲಾಗಿದೆ. ಸಂಬಂಧಿಸಿದವರೊಂದಿಗೆ ವ್ಯಾಪಕ ಸಮಾಲೋಚನೆಗಾಗಿ ಸಾರ್ವಜನಿಕ ವಲಯದಲ್ಲಿ ಮಂಡಿಸಲಾಗುವ ಯೋಜನೆಯು ಸಂಚಿತ ಪರಿಸರ ಪರಿಣಾಮ, ಪರಿಸರ ಧಾರಣ ಸಾಮರ್ಥ್ಯಗಳ ಮೌಲ್ಯಮಾಪನದ ಜೊತೆಗೆ ಪರಿಸರ ಸೂಕ್ಷ್ಮ ಮತ್ತು ಸಂರಕ್ಷಣೆಗಾಗಿ ನಿರ್ಣಾಯಕ ಪ್ರದೇಶಗಳನ್ನು ಗುರುತಿಸಲಿದೆ. ಜೊತೆಗೆ ಪರಿಸರ ಮರುಸ್ಥಾಪನೆ ಮತ್ತು ಪುನರ್ವಸತಿಗಾಗಿ ಕ್ರಮಗಳನ್ನೂ ನಿಗದಿಗೊಳಿಸಲಿದೆ.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಗಣಿಗಳಿಗೆ ಸಂಬಂಧಿಸಿದಂತೆ ಕೇಂದ್ರವು, ರಾಜ್ಯ ಸರಕಾರಗಳು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಎಲ್ಲ ಪರಿಸರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries