HEALTH TIPS

ಪ್ರಧಾನಿ ಕಚೇರಿಯು ಅನುಮಾನಾಸ್ಪದ ವ್ಯಕ್ತಿಗಳ ನಿಯಂತ್ರಣದಲ್ಲಿದೆ: ಕಾಂಗ್ರೆಸ್‌ ಆರೋಪ

ನವದೆಹಲಿ: ಪ್ರಧಾನ ಮಂತ್ರಿ ಕಚೇರಿಯು (ಪಿಎಂಒ) ಅನುಮಾನಾಸ್ಪದ ವ್ಯಕ್ತಿಗಳ ನಿಯಂತ್ರಣದಲ್ಲಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, 'ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ನವನೀತ್‌ ಸೆಹಗಲ್‌ ಅವರನ್ನು ಪಿಎಂಒ ಕಚೇರಿಗೆ ನೇಮಿಸಲಾಗಿದೆಯೇ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದೆ.

ಇತ್ತೀಚೆಗೆ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸೆಹಗಲ್‌, ಉತ್ತರ ಪ್ರದೇಶದಲ್ಲಿ ನಡೆದ ₹112 ಕೋಟಿ ಲಂಚ ಹಗರಣದ ಪ್ರಮುಖ ಪಾತ್ರದಾರಿ ಆಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್‌ ಖೇರಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಿಎಂಒ ಕಚೇರಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಹಿರೇನ್‌ ಜೋಶಿ ಅವರ ಜಾಗಕ್ಕೆ ಸೆಹಗಲ್‌ ಅವರನ್ನು ನೇಮಿಸಲಾಗುತ್ತದೆ ಎಂಬ ವರದಿಗಳು ಬರುತ್ತಿವೆ. ಇದನ್ನು ಸರ್ಕಾರ ಖಚಿತಪಡಿಸಬೇಕು ಎಂದು ಅವರ ಒತ್ತಾಯಿಸಿದರು.

ಇದಕ್ಕೂ ಮುನ್ನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪಿಎಂಒ ಕಚೇರಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು. ಪಿಎಂಒದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಬಹುಕೋಟಿ ಬೆಟ್ಟಿಂಗ್‌ ಅಪ್ಲಿಕೇಷನ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪಿಸಿದ್ದರು.

'ಸೆಹಗಲ್‌ ಅವರು ಉತ್ತರ ಪ್ರದೇಶದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾಗ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಮತ್ತು ಉತ್ತರ ಪ್ರದೇಶ ಕೈಗಾರಿಕಾ ಕನ್ಸಲ್ಟೆಂಟ್ಸ್‌ ಲಿಮಿಟೆಡ್‌ನ ಯೋಜನೆಗಳಿಂದ ಸುಮಾರು ₹112 ಕೋಟಿ ಕಿಕ್‌ಬ್ಯಾಕ್‌ ಜಾಲದ ದೊಡ್ಡ ಫಲಾನುಭವಿ ಎಂದು ಗುರುತಿಸಲಾಗಿದೆ' ಎಂದು ಖೇರಾ ಅವರು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಹೇಳಿದರು.

2019-20 ಮತ್ತು 2021-22ರಲ್ಲಿ ನಡೆದ ಈ ಹಗರಣದ ವಿವರಗಳ ಕುರಿತ ವರದಿಯನ್ನು ಐಟಿ ಇಲಾಖೆಯು ಸರ್ಕಾರ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿದೆ. ಆದರೆ ಅದು ರಾಜ್ಯ ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್‌ ಅನ್ನು ಇಲ್ಲಿಯವರೆಗೆ ತಲುಪಿಲ್ಲ ಇಲ್ಲ. ಆಶ್ಚರ್ಯ ಎಂದರೆ ಅದೇ ಐಟಿ ಅಧಿಕಾರಿಯು ಮುಕ್ತರ್‌ ಅನ್ಸಾರಿ ಅವರ ಬಗ್ಗೆ ಸಲ್ಲಿಸಿದ ವರದಿ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಸೆಹಗಲ್‌ ವಿಷಯದಲ್ಲಿ ಹಾಗಾಗಿಲ್ಲ ಎಂದು ದೂರಿದರು.

'ಒಟ್ಟಿನಲ್ಲಿ ಪಿಎಂಒ ಕಚೇರಿಯು ಅನುಮಾನಸ್ಪದ ಜನರಿಂದಲೇ ತುಂಬಿದ್ದು, ಅಂಥವರ ನಿಯಂತ್ರಣದಲ್ಲಿಯೇ ಇದೆ. ಎಷ್ಟೇ ಬೆದರಿಕೆಗಳು, ಕಾನೂನು ಕ್ರಮದ ಎಚ್ಚರಿಕೆಗಳು ಬಂದರೂ ನಾವು ಸತ್ಯ ಹೇಳುವುದಕ್ಕೆ ಹಿಂಜರಿಯುವುದಿಲ್ಲ' ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries