ತಿರುವನಂತಪುರಂ: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮೂರು ಸ್ಥಾನಗಳನ್ನು ಗೆದ್ದು ಬೀಗಿದೆ. ಮೂರೂ ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಗೆದ್ದಿರುವುದು ವಿಶೇಷ.
ಬೀನಾ ಕುರಿಯನ್ (ವಾರ್ಡ್ 13, ಕರಿಂಕುನ್ನಂ ಗ್ರಾಮ ಪಂಚಾಯಿತಿ), ಸಿನಿ ಆಂಟೋನಿ (ವಾರ್ಡ್ 16, ಮುಳ್ಳೆಂಕೊಲ್ಲಿ ಗ್ರಾಮ ಪಂಚಾಯಿತಿ), ಮತ್ತು ಸ್ಮಿತಾ ಲೂಕ್ (ವಾರ್ಡ್ 4, ಉಳವೂರು ಗ್ರಾಮ ಪಂಚಾಯಿತಿ) ಗೆದ್ದಿರುವ ಎಎಪಿ ಅಭ್ಯರ್ಥಿಗಳು.
ದೆಹಲಿಯ ಮಾಜಿ ಮೇಯರ್ ಮತ್ತು ಎಂಸಿಡಿ ಎಎಪಿ ಕೌನ್ಸಿಲರ್ ಡಾ. ಶೆಲ್ಲಿ ಒಬೆರಾಯ್ ವಿಜೇತರನ್ನು ಅಭಿನಂದಿಸಿದ್ದು, 'ಈ ಗೆಲುವು ಮಹಿಳಾ ಸಬಲೀಕರಣದ ಪ್ರಬಲ ಉದಾಹರಣೆಯಾಗಿದೆ' ಎಂದು ಬಣ್ಣಿಸಿದ್ದಾರೆ.
'ಈ ಯಶಸ್ಸು ಪಕ್ಷದ ಸಮರ್ಪಿತ ಸ್ವಯಂಸೇವಕರ ದಣಿವರಿಯದ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಜತೆಗೆ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ದೂರದೃಷ್ಟಿ ಮತ್ತು ಸಾರ್ವಜನಿಕ ಸೇವೆಗೆ ಪಕ್ಷದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ' ಎಂದೂ ಶೆಲ್ಲಿ ಒಬೆರಾಯ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ (ಯುಡಿಎಫ್) 'ನಿರ್ಣಾಯಕ ತೀರ್ಪು' ನೀಡಿದ್ದಕ್ಕಾಗಿ ಕೇರಳದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದರು.
ಇತ್ತ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್‌ಡಿಎ) ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ನಿಂದ ಅಧಿಕಾರ ಕಸಿದುಕೊಳ್ಳುವ ಮೂಲಕ ಪಾಲಿಕೆಯಲ್ಲಿ 45 ವರ್ಷಗಳ ನಿರಂತರ ಎಡಪಂಥೀಯ ಆಡಳಿತಕ್ಕೆ ಅಂತ್ಯ ಹಾಡುತ್ತಿದ್ದಂತೆ ಕೇರಳ ರಾಜಧಾನಿಯಲ್ಲಿ ಕಮಲ ಅರಳಿದೆ.
ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಐತಿಹಾಸಿಕ ಗೆಲುವು ಸಾಧಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು 'ಎಕ್ಸ್' ಪೋಸ್ಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.

