ನವದೆಹಲಿ: ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್ 'ಕೋಲ್ಡ್ರಿಫ್'ನಲ್ಲಿ ಔಷಧ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳ ಬದಲು ಕೈಗಾರಿಕಾ ದರ್ಜೆಯ ಕಚ್ಚಾವಸ್ತುಗಳನ್ನು ಬಳಸಲಾಗುತ್ತಿತ್ತು ಎಂಬ ಸಂಗತಿ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಈ ಪ್ರಕರಣದ ಪ್ರಮುಖ ಆರೋಪಿ, 'ಕೋಲ್ಡ್ರಿಫ್' ಸಿರಪ್ ತಯಾರಿಸುವ ಚೆನ್ನೈನ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ಪ್ರವರ್ತಕ ಜಿ. ರಂಗನಾಥನ್ ಅವರ ಜತೆಗೆ ತಮಿಳುನಾಡಿನ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು 'ನಿರಂತರ ಸಂಪರ್ಕದಲ್ಲಿದ್ದರು'. ಆದರೆ, ಜೌಷಧ ತಯಾರಿಕಾ ಘಟಕದಲ್ಲಿ ವರ್ಷಕ್ಕೊಮ್ಮೆ ಕಡ್ಡಾಯವಾಗಿ ನಡೆಸಬೇಕಿದ್ದ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿರಲಿಲ್ಲ. ಕೈಗಾರಿಕಾ ದರ್ಜೆಯ ಕಚ್ಚಾವಸ್ತುವನ್ನು ನಗದು ನೀಡಿ ಖರೀದಿಸಲಾಗುತ್ತಿತ್ತು, ಯಾವುದೇ ದಾಖಲೆ ಸಿಗದಂತೆ ಮಾಡಲು ಹೀಗೆ ಮಾಡಲಾಗುತ್ತಿತ್ತು' ಎಂದೂ ಅಧಿಕಾರಿಗಳು ಹೇಳಿದ್ದಾರೆ.
ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ಅಕ್ಟೋಬರ್‌ನಲ್ಲಿ ಬಂಧಿಸಿದ್ದರು. ಜಾರಿ ನಿರ್ದೇಶನಾಲಯವು ಆರೋಪಿಗೆ ಸೇರಿದ ಚೆನ್ನೈನ ಕೊಡಂಬಾಕ್ಕಂನಲ್ಲಿರುವ ₹2.04 ಕೋಟಿ ಮೌಲ್ಯದ ಫ್ಲ್ಯಾಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದೆ.




