ಕೋಲ್ಕತ್ತಾ: ನಗದಿಗಾಗಿ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ 32,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಕಲ್ಕತ್ತಾ ಹೈಕೋರ್ಟಿನ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಈ ಶಾಲಾ ಶಿಕ್ಷಕರನ್ನು 2014 ಶಿಕ್ಷಕರ ಅರ್ಹತಾ ಪರೀಕ್ಷೆಯ ಮೂಲಕ ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕ ಮಾಡಿಕೊಂಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, ಎಲ್ಲ ನೇಮಕಾತಿಗಳೂ ಅಸಮರ್ಪಕ ಎಂಬುದು ಸಾಬೀತಾಗಿಲ್ಲ ಹಾಗೂ ಒಂಭತ್ತು ವರ್ಷದ ನಂತರ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಿದರೆ, ಅವರು ಹಾಗೂ ಕುಟುಂಬಗಳ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮವುಂಟಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತು.
ಎಲ್ಲ ನೇಮಕಾತಿಗಳಲ್ಲೂ ಅಕ್ರಮ ನಡೆದಿಲ್ಲ ಎಂದು ಹೇಳಿದ ನ್ಯಾ. ತಪಬ್ರತ ಚಕ್ರಬೋರ್ತಿ ನೇತೃತ್ವದ ನ್ಯಾಯಪೀಠ, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿಯಲು ನಿರಾಕರಿಸಿತು.
"ವ್ಯವಸ್ಥಿತ ಲೋಪವಾಗಿರುವ ಸಾಧ್ಯತೆ ಇರುವಂತಿದೆ. ಆದರೆ, ದಾಖಲೆಗಳ ಮೌಲ್ಯಮಾಪನ ಅದನ್ನೇ ಹೇಳುತ್ತಿಲ್ಲ. ಇಡೀ ವ್ಯವಸ್ಥೆಯನ್ನು ವಿಫಲ ಅಭ್ಯರ್ಥಿಗಳ ಗುಂಪೊಂದು ಕೈವಶ ಮಾಡಿಕೊಳ್ಳಲು ಅವಕಾಶ ನೀಡಬಾರದು. ಇದೇ ವೇಳೆ, ಶಿಕ್ಷಕರನ್ನು ಒಂಭತ್ತು ವರ್ಷಗಳ ನಂತರ ಸೇವೆಯಿಂದ ತೆಗೆದುಹಾಕಿದರೆ, ತಾಳಿಕೊಳ್ಳಲು ಸಾಧ್ಯವಾಗದಷ್ಟು ತೊಂದರೆಯುಂಟಾಗುತ್ತದೆ" ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು ಎಂದು LiveLaw ವರದಿ ಮಾಡಿದೆ.
ನ್ಯಾಯಾಲಯದ ನಿರ್ದೇಶನದನ್ವಯ ನಡೆದಿದ್ದ ಸಿಬಿಐ ತನಿಖೆಯ ವೇಳೆ 264 ನೇಮಕಾತಿಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿತ್ತು. ಬಳಿಕ, ಇನ್ನೂ 96 ಶಿಕ್ಷಕರ ನೇಮಕಾತಿಯೂ ಪರಿಶೀಲನೆಗೊಳಪಟ್ಟಿತ್ತು. ಇದರ ಆಧಾರದಲ್ಲಿ ಇಡೀ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.




