ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಡಿ. 11ರಂದು ನಡೆಯಲಿದ್ದು, ಈಬಗ್ಗೆ ಸಿದ್ಧತೆ ಪೂರ್ಣಗೊಂಡಿರುವುದಾಗಿ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರಗಳಿಂದ ಡಿ. 10ರಂದುಬೆಳಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರ ಸೇರಿದಂತೆ ಚುನಾವಣಾ ಸಾಮಗ್ರಿ ಹಸ್ತಾಂತರಿಸಲಾಗುವುದು. ಈ ಕೆಲಸ ಮಧ್ಯಾಹ್ನ 12 ಗಂಟೆಯೊಳಗೆ ಪೂರ್ಣಗೊಳ್ಳಲಿದೆ.
ಜಿಲ್ಲಾ ಮಟ್ಟದಲ್ಲಿ ಚುನಾವಣಾ ಸಾಮಗ್ರಿ ವಿತರಣೆ ಮತ್ತು ಸ್ವೀಕೃತಿಗಾಗಿ ಒಂಬತ್ತು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 119 ಸೂಕ್ಷ್ಮ ಮತಗಟ್ಟೆಗಳಿದ್ದು, ಇಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಆಯೋಜಿಸಲಾಗಿದೆ. ಕಾಸರಗೋಡಿನ ಎನ್‍ಎಸ್‍ಜಿಡಿ ಜಂಟಿ ನಿಬಂಧಕರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ವೆಬ್ ಕಾಸ್ಟಿಂಗ್ ನಿಯಂತ್ರಣ ಕೊಠಡಿ ಕಾರ್ಯಾಚರಿಸಲಿದೆ. 11 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆಯೊಳಗೆ ಮತಗಟ್ಟೆ ಪ್ರದೇಶದಲ್ಲಿ ಹಾಜರಿರುವವರಿಗೆ ಮತ ಚಲಾಯಿಸಲು ಅವಕಾಶಮಾಡಿಕೊಡುವ ನಿಟ್ಟಿನಲ್ಲಿ ಸರತಿಸಾಲಲ್ಲಿದ್ದವರಿಗೆ ಟೋಕನ್ ನೀಡಲಾಗುವುದು. ಗಡಿಪ್ರದೇಶದಲ್ಲಿ ಉಂಟಾಗಬಹುದಾದ ಅಹಿತಕರ ಘಟನೆಗಳನ್ನು ನಿಗ್ರಹಿಸುವ ಬಗ್ಗೆ ಗಡಿಪ್ರದೇಶದ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 1370 ಮತಗಟ್ಟೆಗಳಿವೆ. ಜಿಲ್ಲೆಯ ಒಟ್ಟು 1112190 ಮತದಾರರಲ್ಲಿ 524022 ಪುರುಷ ಮತದಾರರು, 588156 ಮಹಿಳಾ ಮತದಾರರು ಮತ್ತು 12 ಮಂದಿ ಟ್ರಾನ್ಸ್‍ಜೆಂಡರ್‍ಗಳಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಚುನಾವಣಾಧಿಕಾರಿಗಳಾಗಿರುವ 179 ಮತಗಟ್ಟೆಗಳು ಕಾರ್ಯಾಚರಿಸಲಿದೆ. ಚುನಾವಣೆಗೆ ಸಂಬಂಧಿಸಿದ ಸಾರಿಗೆ ಅಗತ್ಯಗಳಿಗಾಗಿ ಆರ್‍ಟಿಒ ಮೂಲಕ 689 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಅಧಿಕಾರಿಗಳು ಕರ್ತವ್ಯದ ನಂತರ ತಮ್ಮ ಮನೆಗಳನ್ನು ತಲುಪಲು ಹೆಚ್ಚುವರಿ ಸೇವೆಗಳನ್ನು ಒದಗಿಸುವ ಕಾರ್ಯವನ್ನು ಕೆಎಸ್‍ಆರ್‍ಟಿಸಿ ಮತ್ತು ಮೋಟಾರು ವಾಹನ ಇಲಾಖೆಗೆ ವಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ 13 ಮಂದಿ ಡಿವೈಎಸ್ಪಿಗಳು, 29 ಇನ್ಸ್‍ಪೆಕ್ಟರ್‍ಗಳು, 184 ಎಸ್‍ಐ ಮತ್ತು ಎಎಸ್‍ಐಗಳು, 2100 ಎಸ್‍ಪಿಒ ಮತ್ತು ಸಿಪಿಒಗಳು ಮತ್ತು 467 ವಿಶೇಷ ಪೆÇಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ತಿಳಿಸಿದ್ದಾರೆ.
ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕಿ ಆರ್. ಶೈನಿ, ಎಎಸ್ಪಿ ಸಿ.ಎಂ. ದೇವದಾಸನ್, ಸಿಆರ್‍ಪಿ-ಆರ್‍ಎಎಫ್ ಸಹಾಯಕ ಕಮಾಂಡೆಂಟ್ ಟಿ.ಜೆ. ಜೆಬಕುಮಾರ್, ಚುನಾವಣಾ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಸ್ಥಳೀಯಾಡಳಿತ ಇಲಾಖೆಯ ಉಪನಿರ್ದೇಶಕ ಕೆ.ವಿ.ಹರಿದಾಸ್ ಪಾಲ್ಗೊಂಡಿದ್ದರು.


