ಕಾಸರಗೋಡು: ಬೀದಿಗಳಲ್ಲಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ನಾಯಿಗಳು, ನಗರದ ಜನರಲ್ ಅಸ್ಪತ್ರೆ ವಠಾರದಲ್ಲೂ ತುಂಬಿಕೊಂಡಿದ್ದು, ಚಿಕಿತ್ಸೆಗೆ ಆಗಮಿಸುವ ರೋಗಿಗಳಲ್ಲೂ ಭೀüತಿಗೆ ಕಾರಣವಾಗಿದೆ.
ಆಸ್ಪತ್ರೆ ವಠಾರದಲ್ಲಿ ಬೀದಿನಾಯಿಗಳು ತುಂಬಿಕೊಂಡಿರುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ನಗರದ ನೆಲ್ಲಿಕುಂಜೆ ಪ್ರದೇಶದಲ್ಲಿ ಬೀದಿನಾಯಿ ಕಡಿತದಿಂದ ವಿದ್ಯಾರ್ಥಿ ಸೇರಿದಂತೆ ಹಲವು ಮಂದಿ ಗಾಯಗೊಂಡಿರುವ ಘಟನೆ ಹಸಿರಾಗಿರುವ ಮಧ್ಯೆ, ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಬೀದಿನಾಯಿಗಳು ವ್ಯಾಪಕವಾಗಿ ಅಡ್ಡಾಡುತ್ತಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ. ಆಸ್ಪತ್ರೆ ಆಸುಪಾಸು ಲಭಿಸುವ ಆಹಾರ ವಸ್ತುಗಳಿಗಾಗಿ ಬೀದಿನಾಯಿಗಳು ಇಲ್ಲಿ ಬಂದು ಸೇರಿಕೊಳ್ಳುತ್ತಿದೆ.
ನಗರದಲ್ಲಿ ಭಾನುವಾರ ಒಂದೇ ದಿನ ಆರು ಮಂದಿಗೆ ಬೀದಿನಾಯಿಗಳು ಕಚ್ಚಿದ್ದು, ಕೆಲವು ಸಾಕು ಮೃಗಗಳ ಮೇಲೆಯೂ ದಾಳಿ ನಡೆಸಿದೆ.
ತ್ಯಾಜ್ಯ ಸುರಿಯುವಿಕೆ ಕಾರಣ:
ಸಾರ್ವಜನಿಕ ಸ್ಥಳದಲ್ಲಿ ವ್ಯಾಪಕವಾಗಿ ತ್ಯಾಜ್ಯ ಸುರಿಯುತ್ತಿರುವುದು ಬೀದಿನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯ ನಾನಾ ಕಡೆ ಅನಧಿಕೃತ ಕಸಾಯಿಖಾನೆಗಳು ತಲೆಯೆತ್ತುತ್ತಿದ್ದು, ಇಲ್ಲಿಂದ ಹೊರಬೀಳುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿರುವುದರಿಂದ ತ್ಯಾಜ್ಯ ಅರಸಿಕೊಂಡು ಬರುವ ನಾಯಿಗಳ ಸಂಖ್ಯೆಯೂ ಹೆಚ್ಚುತ್ತಿರುವುದಾಗಿ ನಾಗರಿಕರು ಅಭಿಪ್ರಾಯಪಡುತ್ತಾರೆ.




