ಇಂಫಾಲ : ಮಣಿಪುರದ ಬಿಷ್ಣುಪುರ ಮತ್ತು ಚುರಚಂಡಾಪುರ ಜಿಲ್ಲೆಗಳ ಗಡಿಭಾಗದ ತೊರ್ಬಂಗ್‍ನಲ್ಲಿ ಮಂಗಳವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಸಶಸ್ತ್ರ ಕಿಡಿಗೇಡಿಗಳ ನಡುವೆ ಗುಂಡಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಜನಾಂಗೀಯ ಹಿಂಸೆಯಿಂದ ಜರ್ಜರಿತವಾದ ರಾಜ್ಯದಲ್ಲಿ ಮತ್ತೆ ಪ್ರಕ್ಷುಬ್ಧತೆ ತಲೆದೋರಿದೆ.
ಘಟನೆಯಲ್ಲಿ ಒಬ್ಬ ನಾಗರಿಕ ಗಾಯಗೊಂಡಿದ್ದಾಗಿ ಭದ್ರತಾ ಪಡೆಗಳು ದೃಢಪಡಿಸಿವೆ. ಆದರೆ ಗಾಯಾಳು ವ್ಯಕ್ತಿಯ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.
ಫೌಗಾಕ್ ಚಾವೊ ಮತ್ತು ತೊರ್ಬಂಗ್ ನ ನಿವಾಸಿಗಳ ಪ್ರಕಾರ, ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ 67 ಕುಟುಂಬಗಳ ಸುಮಾರು 389 ಮಂದಿ ತೊರ್ಬಂಗ್ ನಲ್ಲಿ ಮರುವಸತಿ ಪಡೆದಿದ್ದರು.
ಮಂಗಳವಾರ ರಾತ್ರಿ 8.30ರ ವೇಳೆಗೆ ಕೆಲ ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳು ಚುರಚಂಡಾಪುರ ಬದಿಯಿಂದ ಭದ್ರತಾ ಪಡೆಗಳ ಮೇಲೆ ಗುಂಡುಹಾರಿಸಿದರು. ಭದ್ರತಾ ಪಡೆ ಯೋಧರು ತಕ್ಷಣ ಪ್ರತಿದಾಳಿ ನಡೆಸಿದರು. ಒಬ್ಬ ಶಸ್ತ್ರಧಾರಿ ಬಾಂಬ್ ಕೂಡಾ ಬಳಸಿದ್ದಾನೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ. ಹೊಸ ಗುಂಡಿನ ಚಕಮಕಿ ಈ ಪ್ರದೇಶದ ಗ್ರಾಮಸ್ಥರದಲ್ಲಿ ಭೀತಿ ಮೂಡಿಸಿದೆ.
ರಾಜ್ಯ ಪೊಲೀಸ್ ಪಡೆ ಹಾಗೂ ಕೇಂದ್ರೀಯ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ಧಾವಿಸಿದ್ದು, ತೊರ್ಬಂಗ್ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಉದ್ವಿಗ್ನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

