HEALTH TIPS

ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು

ಪಣಜಿ: ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರು, ಪರಿಚಯದವರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ್ದಾರೆ. ಶವಗಳ ಗುರುತಿಸುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಸ್ಪತ್ರೆಯ ಆವರಣದಲ್ಲಿ ದುಃಖ ಮಡುಗಟ್ಟಿದೆ.

ದುರಂತದಲ್ಲಿ ಒಟ್ಟು 25 ಮಂದಿ ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಹಲವರು ಕೆಲಸದ ಸಲುವಾಗಿ ಜಾರ್ಖಂಡ್‌, ಅಸ್ಸಾಂನಿಂದ ಬಂದವರಾಗಿದ್ದಾರೆ. ಅವರ ಸಂಬಂಧಿಕರು, ತಾವು ಶವಗಳನ್ನು ಸ್ವೀಕರಿಸುವುದಿಲ್ಲ. ಮಾಲೀಕರೇ ಊರಿಗೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪಣಜಿ ಸಮೀಪ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್‌) ಎದುರು ಜಾರ್ಖಂಡ್‌ ಕಾರ್ಮಿಕರ ತಂಡ ಬೆಳಗ್ಗೆಯಿಂದಲೂ ಬೀಡುಬಿಟ್ಟಿದ್ದು, ಮೃತರ ಮಾಹಿತಿಗಾಗಿ ಕಾಯುತ್ತಿದೆ.

ಮೃತರ ಗುರುತು ಪತ್ತೆಗೆ ಪೊಲೀಸರು ಗೋವಾ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ. ಶವಗಳನ್ನು ಶವಾಗರದಲ್ಲಿ ಇರಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟವರಲ್ಲಿ ನಾಲ್ಕು ಮಂದಿ ಪ್ರವಾಸಿಗರು. 14 ಜನರು ಕ್ಲಬ್‌ನ ಸಿಬ್ಬಂದಿ. ಉಳಿದವರ ಗುರುತು ಇನ್ನಷ್ಟೇ ಗೊತ್ತಾಗಬೇಕಿದೆ.

'ಶವಗಳನ್ನು ಪಡೆಯುವುದಿಲ್ಲ'
ಅರ್ಪೋರಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಜಾರ್ಖಂಡ್‌ನ ನಂದಲಾಲ್‌ ನಾಗ್‌ ಎಂಬವರು, ಅವರದ್ದೇ ಹಳ್ಳಿಯ ನಾಲ್ಕು ಮಂದಿ ಬೆಂಕಿಗೆ ಆಹುತಿಯಾಗಿರಬಹುದು ಎಂದು ಶಂಕಿಸಿದ್ದಾರೆ.

'ನನ್ನದೇ ಊರಿನ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬ ನನ್ನ ಸಹೋದರನ ಮಗ. ಅವರೆಲ್ಲರೂ, ನೈಟ್‌ಕ್ಲಬ್‌ನಲ್ಲಿ ಬಾಣಸಿಗರಾಗಿ ಮತ್ತು ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು' ಎಂದಿದ್ದಾರೆ.

ಸಂತ್ರಸ್ತರು ಐದು ವರ್ಷಗಳ ಹಿಂದೆ ಜಾರ್ಖಂಡ್‌ನಿಂದ ಗೋವಾಗೆ ಬಂದಿದ್ದರು. ಆಗಿನಿಂದಲೂ ಬೇರೆ ಬೇರೆ ಹೋಟೆಲ್‌ಗಳು ನೈಟ್‌ಕ್ಲಬ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದೂ ಹೇಳಿದ್ದಾರೆ.

ಮುಂದುವರಿದು, 'ಶವಗಳನ್ನು ತೆಗೆದುಕೊಂಡು ಏನು ಮಾಡೋಣ?' ಎಂದು ನೋವಿನಿಂದಲೇ ಕೇಳಿರುವ ನಾಗ್‌, 'ಅವುಗಳನ್ನು ಊರಿಗೆ ತೆಗೆದುಕೊಂಡು ಹೋಗಲು ನೈಟ್‌ಕ್ಲಬ್‌ ಮಾಲೀಕರೇ ವ್ಯವಸ್ಥೆ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.

ಅಸ್ಸಾಂನಿಂದ ಬಂದಿರುವ ಮತ್ತೊಂದು ಗುಂಪೂ ಶವಾಗಾರದ ಎದುರು ಕುಳಿತಿದೆ. ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದೆ. ಆದಾಗ್ಯೂ, ಅಲ್ಲಿದ್ದವರಲ್ಲಿ ಒಬ್ಬರು, ಮೃತರಲ್ಲಿ ಕೆಲವರು ತಮ್ಮ ಸ್ನೇಹಿತರು ಎಂದು ಹೇಳಿದ್ದಾರೆ.

ಶವಗಳ ಪತ್ತೆ ಹಾಗೂ ಶವಪರೀಕ್ಷೆಗೆ ಒಂದು ದಿನ ಬೇಕಾಗಬಹುದು. ನಂತರವಷ್ಟೇ ಅವರ ಸಂಬಂಧಿಕರಿಗೆ ಹಸ್ತಾಂತರಿಸಲು ಸಾಧ್ಯ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವಷ್ಟೇ, ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಜಿಎಂಸಿಎಚ್‌ ವಿಧಿವಿಜ್ಞಾನ ವಿಭಾಗದ ಮೂಲಗಳು ಮಾಹಿತಿ ನೀಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries