ಕಾಬೂಲ್: ಪ್ರಸಿದ್ಧ ಕವಿ ಮತಿಯುಲ್ಲಾ ತುರಾಬ್ ಅವರ ಸಮಾಧಿಯ ಮೇಲೆ `ಗ್ರೇಟರ್ ಅಫ್ಘಾನಿಸ್ತಾನ' ನಕ್ಷೆಯನ್ನು ಇರಿಸುವ ಮೂಲಕ ತಾಲಿಬಾನ್ ಪಾಕಿಸ್ತಾನಕ್ಕೆ ಬಲವಾದ ರಾಜಕೀಯ ಸಂದೇಶವನ್ನು ರವಾನಿಸಿದೆ ಎಂದು ವರದಿಯಾಗಿದೆ.
ಈ ನಕ್ಷೆಯಲ್ಲಿ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಮತ್ತು ಬಲೂಚಿಸ್ತಾನದ ಭಾಗಗಳು ಒಳಗೊಂಡಿದ್ದು ಇವುಗಳನ್ನು ` ಐತಿಹಾಸಿಕ ಅಫ್ಘಾನ್ ಭೂಮಿ' ಎಂದು ಗುರುತಿಸಿರುವುದು ಪಾಕಿಸ್ತಾನದ ಸಾರ್ವಭೌಮತೆಗೆ ನೇರವಾಗಿ ಸವಾಲು ಹಾಕುವ ಕ್ರಮವಾಗಿದೆ.
ಇದು ಉದ್ದೇಶಪೂರ್ವಕ ಮತ್ತು ಸಾಂಕೇತಿಕ ಕೃತ್ಯವಾಗಿದ್ದು ಡ್ಯುರಾಂಡ್ ಗೆರೆಯನ್ನು ತಿರಸ್ಕರಿಸುವ ಅಫ್ಘಾನಿಸ್ತಾನದ ದೃಢ ನಿಲುವಿಗೆ ಅನುಗುಣವಾಗಿದೆ ಎಂದು ತಾಲಿಬಾನ್ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್ 18 ವರದಿ ಮಾಡಿದೆ. 1893ರಲ್ಲಿ ಗುರುತಿಸಲಾದ ಡ್ಯುರಾಂಡ್ ಗೆರೆಯನ್ನು ಅಫ್ಘಾನಿಸ್ತಾನ ಯಾವತ್ತೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. `ಗ್ರೇಟರ್ ಅಫ್ಘಾನಿಸ್ತಾನದ ನಕ್ಷೆಯು ಡ್ಯುರಾಂಡ್ ಗೆರೆ ನಮಗೆ ಒಪ್ಪಿಗೆಯಿಲ್ಲದ ಗಡಿ ಗುರುತಾಗಿದೆ ಎಂಬ ನಮ್ಮ ದೀರ್ಘಾವಧಿಯ ನಿಲುವನ್ನು ಪ್ರತಿಬಿಂಬಿಸಿದೆ ಎಂದು ಮೂಲಗಳು ಹೇಳಿವೆ.




