ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಸೋದರ ಸಂಬಂಧಿ, ಬ್ರಿಟನ್‌ನ ಸಂಸದೆ ತುಲಿಪ್ ರಿಜ್ವಾನಾ ಸಿದ್ದಿಕ್ ಅವರನ್ನು ಭೂ ಹಗರಣ ಪ್ರಕರಣವೊಂದರಲ್ಲಿ ದೋಷಿಗಳು ಎಂದು ಬಾಂಗ್ಲಾದೇಶದ ನ್ಯಾಯಾಲಯವೊಂದು ಸೋಮವಾರ ಘೋಷಿಸಿದೆ. ಅಪರಾಧಿಗಳಿಗೆ ಕ್ರಮವಾಗಿ 5 ವರ್ಷ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
17 ಮಂದಿ ವಿರುದ್ಧ ದಾಖಲಿಸಲಾಗಿದ್ದ ಈ ಭ್ರಷ್ಟಾಚಾರ ಪ್ರಕರಣದಲ್ಲಿ ಹಸೀನಾ ಅವರ ಸಹೋದರಿ ಶೇಖ್ ರಿಹಾನಾ ಅವರಿಗೂ 7ವರ್ಷಗಳ ಜೈಲು ಶಿಕ್ಷೆಯನ್ನು ಢಾಕಾದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಮೊಹಮ್ಮದ್ ರಬೀವುಲ್ ಆಲಂ ಘೋಷಿಸಿದ್ದಾರೆ.
ಹಸೀನಾ, ತುಲಿಪ್, ರಿಹಾನಾ ಅವರ ಅನುಪಸ್ಥಿತಿಯಲ್ಲೇ ತೀರ್ಪು ನೀಡಲಾಗಿದ್ದು, ಇನ್ನಿತರ 14 ಮಂದಿ ಅಪರಾಧಿಗಳಿಗೆ ತಲಾ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಜತೆಗೆ ಎಲ್ಲಾ 17 ಅಪರಾಧಿಗಳಿಗೂ ತಲಾ 1 ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸುವಲ್ಲಿ ವಿಫಲರಾದರೆ ಅಪರಾಧಿಗಳು ಹೆಚ್ಚುವರಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ನ್ಯಾಯಾಲಯ ತಿಳಿಸಿದೆ.
ಹಸೀನಾ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಮಗಾಗಿ ಹಾಗೂ ತಮ್ಮ ಸಹೋದರಿ ಮತ್ತು ಅವರ ಮಕ್ಕಳಿಗಾಗಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದ ಪ್ರಕರಣ ಇದಾಗಿದೆ.
'ಖಲೀದಾ ಜಿಯಾ ಆರೋಗ್ಯ ಸ್ಥಿತಿ ಗಂಭೀರ'
ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದು ವೆಂಟಿಲೇಟರ್ ಸಹಾಯದೊಂದಿಗೆ ಉಸಿರಾಡುವ ಸ್ಥಿತಿಯಲ್ಲಿದ್ದಾರೆ. ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವೈದ್ಯರ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆಂದು ಬಿಎನ್‌ಪಿ ನಾಯಕರು ಸೋಮವಾರ ತಿಳಿಸಿದ್ದಾರೆ. 'ಶ್ವಾಸಕೋಶ ಸೋಂಕಿನ ಕಾರಣದಿಂದ ನವೆಂಬರ್ 23ರಂದು ಜಿಯಾ ಆಸ್ಪತ್ರೆ ದಾಖಲಾಗಿದ್ದರು. 4 ದಿನಗಳ ಬಳಿಕ ಸಮಸ್ಯೆ ಉಲ್ಭಣಿಸಿದ ನಂತರ ಅವರನ್ನು ಹೆಚ್ಚುವರಿ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗಾಗಿ ಇಡೀ ದೇಶ ಪ್ರಾರ್ಥನೆ ಮಾಡಬೇಕಿದೆ' ಎಂದು ಬಿಎನ್‌ಪಿ ಉಪಾಧ್ಯಕ್ಷ ಅಹ್ಮದ್ ಅಜಂ ಖಾನ್ ಹೇಳಿದ್ದಾರೆ.




