ಕಾಸರಗೋಡು: ಕೇರಳದಲ್ಲಿ 69ವರ್ಷಗಳಿಂದ ಅದಲು ಬದಲಾಗಿ ಆಡಳಿತ ನಡೆಸುತ್ತಿರುವ ಎಡರಂಗ ಹಾಗೂ ಐಕ್ಯರಂಗ ರಾಜ್ಯವನ್ನು ಸಂಪೂರ್ಣವಾಗಿ ಅವನತಿಯತ್ತ ತಳ್ಳಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಪ್ರಧಾನಕಾರ್ಯದರ್ಶಿ ಎಂ.ಟಿ. ರಮೇಶ್ ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಭ್ರಷ್ಟಾಚಾರ ರಹಿತ ಹಾಗೂ ಅಭಿವೃದ್ಧಿಪರ ಆಡಳಿತ ಬಿಜೆಪಿಯ ಧ್ಯೇಯವಾಗಿದ್ದು, ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಜನತೆ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.
ಎಡರಂಗ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಸಿಪಿಎಂ ಮುಖಂಡರು ಶಬರಿಮಲೆ ದೇಗುಲವನ್ನೂ ಬಿಡದೆ ಕಳ್ಳತನ ನಡೆಸುತ್ತಿದ್ದಾರೆ. ದೇಗುಲದ ಸೊತ್ತು ಆ ದೇವಾಲಯಕ್ಕೆ ಸೀಮಿತವಾಗಿರಬೇಕೆಂಬ ಸುಪ್ರೀಂ ಕೋರ್ಟಿನ ತೀರ್ಪು ಎಡರಂಗ ಸರ್ಕಾರಕ್ಕೆ ಪ್ರಹಾರ ನೀಡಿದೆ. ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಯಿರಿಸಿರುವ ದೇಗುಲದ ಮೊತ್ತವನ್ನು ಯಾವುದೇ ಕಾರಣಕ್ಕೂ ಬ್ಯಾಂಕಿನ ಆರ್ಥಿಕ ನಷ್ಟ ಭರಿಸಲು ಬಳಸಕೂಡದು ಎಂಬ ಸುಪ್ರೀಂ ಕೋರ್ಟಿನ ತೀರ್ಪು ಸಿಪಿಎಂ ಮುಖಂಡರಿಗೆ ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ. ಶಬರಿಮಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಒಂದು ಕೋಟಿ ಸಹಿ ಸಂಗ್ರಹ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಲ್ ಅಶ್ವಿನಿ ಉಪಸ್ಥಿತರಿದ್ದರು.
ಕಾಸರಗೋಡು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಸ್ವಾಗತಿಸಿದರು. ಅಧ್ಯಕ್ಷ ಶಿಜು ಕಣ್ಣನ್ ವಂದಿಸಿದರು.




