ಉಪ್ಪಳ: ಉಪ್ಪಳದಲ್ಲಿ ಬಿಎಲ್‍ಓ ಒಬ್ಬರ ಕರ್ತವ್ಯಕ್ಕೆ ತಡೆಯೊಡ್ಡಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಣಿಮುಂಡ ನಿವಾಸಿ, ಬಿಜೆಪಿ ಕಾರ್ಯಕರ್ತ ಇ.ಎಸ್ ಅಮಿತ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಕೂರು ಕನ್ನಟಿಪಾರೆ ನಿವಾಸಿಯಾಗಿರುವ ಬಿಎಲ್‍ಓ ಸುಭಾಷಿಣಿ ಅವರ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ. ಎಸ್‍ಐಆರ್ ಡಾಟಾ ಸಂಗ್ರಹಿಸಿ ಮನೆಗೆ ವಾಪಸಾಗುತ್ತಿದ್ದ ಸುಭಾಷಿಣಿ ಅವರನ್ನು ಹಾದಿಮಧ್ಯೆ ತಡೆದು ಅವರ ವೃತ್ತಿಪರ ಮೊಬೈಲಿನಿಂದ ಎಸ್. ಐ. ಆರ್ ಆಪ್ಲಿಕೇಷನ್ ದಾಖಲೆಗಳನ್ನು ತನ್ನ ಮೊಬೈಲಿಗೆ ರವಾನಿಸಿ, ವಾಟ್ಸಪ್‍ಗಳಲ್ಲಿ ಹಂಚಿಕೊಂಡಿದ್ದನು. ಇದನ್ನು ವಿರೋಧಿಸಿದಾಗ ಜೀವಬೆದರಿಕೆಯೊಡ್ಡಿರುವುದಾಗಿ ಸುಭಾಷಿಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೇ ರೀತಿ ಬಿಎಲ್‍ಓಗೆ ಬೆದರಿಕೆಯೊಡ್ಡಿದ ಪ್ರಕರಣ ಇತ್ತೀಚೆಗೆ ದೇಲಂಪಾಡಿಯಲ್ಲೂ ನಡೆದಿದ್ದು, ಸಿಪಿಎಂ ಕಾರ್ಯಕರ್ತನನ್ನುಬಂಧಿಸಲಾಗಿತ್ತು.
ಕಠಿಣ ಕ್ರಮದ ಭರವಸೆ:
ಜಿಲ್ಲೆಯಲ್ಲಿ ಅತ್ಯಂತ ಪ್ರಾಮಾಣಿಕರಾಗಿ ಮತಗಟ್ಟೆ ಅಧಿಕಾರಿಗಳಾದ ಬಿ. ಎಲ್. ಒ ಅವರು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡುವವರ ವಿರುದ್ಧ ತನಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನಿಡಿದ್ದಾರೆ. ಬೂತ್ ಲೆವೆಲ್ ಅಧಿಕಾರಿಗಳನ್ನು ಬೆದರಿಸಿ ಕರ್ತವ್ಯಕ್ಕೆ ತಡೆಯೊಡ್ಡಿದ ಘಟನೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ.




