ತಿರುವನಂತಪುರಂ: ರೈಲಿನ ಮೇಲೆ ಕಲ್ಲು ತೂರಾಟಗೈದ ಘಟನೆ ವರದಿಯಾಗಿದೆ. ಮಂಗಳವಾರ ಸಂಜೆ 7:30 ರ ಸುಮಾರಿಗೆ ತಿರುವನಂತಪುರಂನಿಂದ ಹೊರಟ ತಿರುವನಂತಪುರಂ-ಮಂಗಳೂರು ಜಂಕ್ಷನ್ ಮಾವೇಲಿ ಎಕ್ಸ್‍ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಡಿದ ದುಷ್ಕರ್ಮಿ ಯಾರೆಂಬುದು ಸ್ಪಷ್ಟವಾಗಿಲ್ಲ.
ತಿರುವನಂತಪುರಂ ಪೆಟ್ಟಾ ರೈಲು ನಿಲ್ದಾಣ ತಲುಪಿದಾಗ ಕಲ್ಲು ತೂರಾಟ ನಡೆದಿದೆ. ಲೋಕೋ ಪೈಲಟ್ ಕುಳಿತಿದ್ದ ರೈಲಿನ ಎಂಜಿನ್ ಬಳಿ ಕಲ್ಲು ತೂರಾಟ ಸಂಭವಿಸಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಯಾರಿಗೂ ಗಾಯಗಳಾಗಿಲ್ಲ. ರೈಲ್ವೆ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.



