ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಿಗೆ ಮುಂಚಿತವಾಗಿ ಕಾಸರಗೋಡಿನ ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಮಾಹಿತಿ ಕಚೇರಿ, ಜಿಲ್ಲಾ ಚುನಾವಣಾ ವಿಭಾಗ ಮತ್ತು 'ಲೀಪ್'ಕೇರಳ ವತಿಯಿಂದ ಹೊರತರಲಾದ ಚುನಾವಣಾ ಮಾರ್ಗದರ್ಶಿಯನ್ನು ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಚುನಾವಣಾ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದರು.
ಎಡಿಎಂ ಪಿ. ಅಖಿಲ್, ಸ್ಥಳೀಯ ಸ್ವಯಂ ಆಡಳಿತ ಇಲಾಖೆ ಜಂಟಿ ನಿರ್ದೇಶಕರು ಆರ್. ಶೈನಿ, ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ. ಎನ್. ಗೋಪಕುಮಾರ್, ಜಿಲ್ಲಾ ಕಾನೂನು ಅಧಿಕಾರಿ ಎಸ್. ಎನ್. ಶಶಿಕುಮಾರ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಸ್ಥಳೀಯಾಡಳಿತ ಇಲಾಖೆ ಉಪ ನಿರ್ದೇಶಕ ಕೆ. ವಿ. ಹರಿದಾಸ್, ಪಿಆರ್‍ಡಿ ಸಹಾಯಕ ಸಂಪಾದಕಿ ಎ ಪಿ ದಿಲ್ನಾ ಪಾಲ್ಗೊಂಡಿದ್ದರು.
ಚುನಾವಣಾ ಮಾರ್ಗದರ್ಶಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳ ಮಾದರಿ ನೀತಿ ಸಂಹಿತೆ, ಚುನಾವಣಾ ಉಸ್ತುವಾರಿ ಅಧಿಕಾರಿಗಳ ವಿವರ, ದೂರವಾಣಿ ಸಂಖ್ಯೆ, ಮತದಾರರ ಪಟ್ಟಿ ವಿವರ, ಹಸಿರು ನೀತಿ ಸಂಹಿತೆ, ಎಐ ಸೇರಿದಂತೆ ಚುನಾವಣಾ ಪ್ರಚಾರಗಳ ಮೇಲ್ವಿಚಾರಣೆ, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಮಟ್ಟದ ಮಾಧ್ಯಮ ಸಂಬಂಧ ಸಮಿತಿ, ಮಾನನಷ್ಟ ವಿರೋಧಿ ದಳ, ಮತ ಎಣಿಕೆ, ಚುನಾವಣಾ ಸಾಮಗ್ರಿ ವಿತರಣೆ ಮತ್ತು ಸ್ವೀಕೃತಿ ಕೇಂದ್ರಗಳು ಸೇರಿದಂತೆ ವಿವಿಧ ಮಾಹಿತಿಯನ್ನು ಒಳಗೊಂಡಿದೆ.





