HEALTH TIPS

'ಬಾಬರಿ ಮಸೀದಿ ಬಗ್ಗೆ ನೆಹರೂ ಹೇಳಿಕೆ ನೀಡಿಲ್ಲ': ಮಣಿಬೆನ್ ಡೈರಿ ಪ್ರತಿಯನ್ನು ರಾಜ್‌ನಾಥ್‌ ಗೆ ಹಸ್ತಾಂತರಿಸಿದ ಜೈರಾಮ್ ರಮೇಶ್

ನವದೆಹಲಿ: ಸರ್ಕಾರಿ ನಿಧಿಗಳನ್ನು ಬಳಸಿಕೊಂಡು ಜವಾಹರಲಾಲ್ ನೆಹರೂ ಅವರು ಬಾಬರಿ ಮಸೀದಿಯನ್ನು ಪುನರ್ನಿರ್ಮಿಸಲು ಬಯಸಿದ್ದರೆಂದು, ವಲ್ಲಭಬಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಪಟೇಲ್ ಅವರ ಮೂಲ ಡೈರಿಯಲ್ಲಿ ಬರೆಯಲಾಗಿತ್ತೆಂಬ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಳ್ಳಿಹಾಕಿದ್ದಾರೆ.

ಇದನ್ನು ದೃಢಪಡಿಸುವುದಕ್ಕಾಗಿ ಅವರು ಗುಜರಾತ್ ಭಾಷೆಯಲ್ಲಿರುವ ಆ ಡೈರಿಯ ಪ್ರತಿಯೊಂದನ್ನು ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ.

ಜೈರಾಮ್ ರಮೇಶ್ ಅವರು ಸಂಸತ್‌ಭವನದ ಮಕರದ್ವಾರದ ಹೊರಗೆ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿಯಾಗಿ, ಅವರಿಗೆ ಮಣಿಬೆನ್ ಅವರ ಗುಜರಾತಿ ಭಾಷೆಯ ಡೈರಿಯ ಪ್ರತಿಯನ್ನು ಹಿಂದಿ ಭಾಷಾ ಅನುವಾದದೊಂದಿಗೆ ನೀಡಿದ್ದಾರೆ.

ಬಾಬರಿ ಮಸೀದಿಯ ಪುನರ್ನಿರ್ಮಾಣಕ್ಕಾಗಿ ಸರಕಾರಿ ಹಣವನ್ನು ಬಳಸುವ ಕುರಿತು ನೆಹರೂ ಪ್ರಸ್ತಾವಿಸಿದ್ದರು. ಆದರೆ ಅದನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ತಡೆದಿದ್ದರು ಎಂದು ರಾಜ್‌ನಾಥ್ ಸಿಂಗ್ ಅವರು ಕಳೆದ ವಾರ ಗುಜರಾತ್‌ನ ವಡೋದರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು.

ಆದರೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿತ್ತು.

ರಕ್ಷಣಾ ಸಚಿವರು ಸುಳ್ಳುಗಳನ್ನು ಹರಡುತ್ತಿದ್ದು, ಅವರು ಕ್ಷಮೆಯಾಚಿಸಬೇಕೆಂದು ಅದು ಆಗ್ರಹಿಸಿತ್ತು.

ಮಣಿಬೆನ್ ಪಟೇಲ್ ಅವರ ಡೈರಿಯ ಬರಹಗಳನ್ನು 2025ರಲ್ಲಿ ಸಿ.ಎ.ಆರ್.ಎಸ್. ಪಟೇಲ್ ಅವರು ಸಮರ್ಪಿತ್ ಪದಚ್ಛಯೋ ಸರ್ದಾರ್ನೋ ಹೆಸರಿನಲ್ಲಿ ಪ್ರಕಟಿಸಿದ್ದರು.

''ರಾಜ್‌ನಾಥ್ ಸಿಂಗ್ ಹಾಗೂ ಅವರ ಸಹ ಇತಿಹಾಸ ತಿರುಚುಗಾರರು ಪ್ರತಿಪಾದಿಸುತ್ತಿರುವುದಕ್ಕೂ , ಡೈರಿಯಲ್ಲಿನ ಉಲ್ಲೇಖಗಳಿಗೂ ಅಗಾಧವಾದ ವ್ಯತ್ಯಾಸವಿದೆ '' ಎಂದು ಜೈರಾಮ್ ರಮೇಶ್ ಅವರು ಡೈರಿಯ ಪುಟಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಶೇರ್ ಮಾಡಿಕೊಂಡು ತಿಳಿಸಿದ್ದಾರೆ.

ನೆಹರೂ ಅವರನ್ನು ಗುರಿಯಿರಿಸಿ ಹಾಗೂ ಐತಿಹಾಸಿಕ ದಾಖಲೆಗಳನ್ನು ತಿರುಚಲು ಬಿಜೆಪಿಯು 'ವಾಟ್ಸಾಪ್ ವಿವಿ'ಯನ್ನು ಅವಲಂಭಿಸಿದೆಯೆಂದು ಕಾಂಗ್ರೆಸ್ ಆಪಾದಿಸಿದೆ.

ಆದಾಗ್ಯೂ ಸಿಂಗ್ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಭಾಂಶು ತ್ರಿವೇದಿ ಅವರು ಇನ್ನೊಂದು ಪ್ರಕಾಶನದ ಪ್ರಕಟಣೆಯಾದ ' ಇನ್‌ಸೈಡ್ ಸ್ಟೋರಿ ಆಫ್ ಸರ್ದಾರ್ ಪಟೇಲ್, ದಿ ಡೈರಿ ಆಫ್ ಮಣಿಬೆನ್ ಪಟೇಲ್ ಕೃತಿಯನ್ನು ಉಲ್ಲೇಖಿಸಿದ್ದಾರೆೆ. ಅದರಲ್ಲಿ ನೆಹರೂ ಅವರು ಬಾಬರಿ ಮಸೀದಿ ವಿಷಯವನ್ನು ಪ್ರಸ್ತಾವಿಸಿದಾಗ,ಪಟೇಲ್ ಅವರು ಸರಕಾರಿ ಖರ್ಚಿನಲ್ಲಿ ಮಸೀದಿ ಮರುನಿರ್ಮಾಣವನ್ನು ವಿರೋಧಿಸಿದ್ದರು ಎಂದು ಉಲ್ಲೇಖಿಸಲಾಗಿದೆ ಎಂದವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries