ಹೈದರಾಬಾದ್: ಬುಧವಾರ ಬೆಳಿಗ್ಗೆ ಹಲವಾರು ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ವ್ಯವಸ್ಥೆಗಳಲ್ಲಿ ತೊಂದರೆಗಳು ಕಂಡು ಬಂದಿದೆ. ಈ ಸಮಸ್ಯೆಗಳಿಂದಾಗಿ ಕೆಲವು ವಿಮಾನಗಳ ಹಾರಾಟ ವಿಳಂಬವಾಗಿವೆ ಎಂದು ವರದಿಯಾಗಿದೆ.
ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಜಾಗತಿಕವಾಗಿ ದೊಡ್ಡ ತೊಂದರೆ ಉಂಟಾಗಿದೆ.
ವಿಮಾನ ನಿಲ್ದಾಣಗಳ ಐಟಿ ಸೇವೆಗಳು ಮತ್ತು ಚೆಕ್ ಇನ್ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎಂದು ವಾರಣಾಸಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನೋಟಿಸ್ ಮೂಲಕ ತಿಳಿಸಲಾಗಿದೆ.
ಇಂಡಿಗೋ, ಸ್ಪೈಸ್‌ಜೆಟ್, ಆಕಾಶ್ ಏರ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.
ತಾಂತ್ರಿಕ ದೋಷದಿಂದ ಬುಧವಾರ ಬೆಳಗ್ಗೆ ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲ ಉಂಟಾಗಿದೆ. ತಮ್ಮ ವಿಮಾನದ ಬಗ್ಗೆ ಮಾಹಿತಿ ತಿಳಿಯಲು ವಿಮಾನಯಾನ ಸಂಸ್ಥೆಯ ಸಹಾಯವಾಣಿ ಕೌಂಟರ್ ಬಳಿ ಪ್ರಯಾಣಿಕರು ಗುಂಪುಗೂಡಿರುವುದು, ಟಿಕೆಟ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಹಿಡಿದುಕೊಂಡು ಸಿಬ್ಬಂದಿಯಲ್ಲಿ ಮಾಹಿತಿ ನೀಡುವಂತೆ ಕೇಳುತ್ತಿರುವುದು ಕಂಡುಬಂದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದು, ತಡವಾಗಿ ಬಂದ ಕಾರಣ ನಾಲ್ಕು ವಿಮಾನಗಳು ವಿಳಂಬವಾದವು. ಹಲವು ಇಂಡಿಗೋ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬುಧವಾರ ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ತಾಂತ್ರಿಕ ದೋಷಗಳಿಂದ ವಿಮಾನಗಳ ವಿಳಂಬ ಅಥವಾ ವೇಳಾಪಟ್ಟಿಯಲ್ಲಿ ಅಡಚಣೆಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.




