HEALTH TIPS

ಡಾಲರ್‌ನೆದುರು ಸಾರ್ವಕಾಲಿಕ ಕನಿಷ್ಠ 90.2ಕ್ಕೆ ಕುಸಿದ ರೂಪಾಯಿ ಮೌಲ್ಯ

ನವದೆಹಲಿ:ಭಾರತೀಯ ರೂಪಾಯಿಯು ಬುಧವಾರ ಅಮೆರಿಕನ್ ಡಾಲರ್ ಎದುರು 90.2 ರೂಪಾಯಿಗೆ ಕುಸಿದಿದ್ದು, ಇತಿಹಾಸದಲ್ಲೇ ಅತೀ ಕಡಿಮೆ ಮಟ್ಟಕ್ಕೆ ತಲುಪಿದೆ. ಅಮೆರಿಕದ ಸುಂಕಗಳು, ವಿದೇಶಿ ಬಂಡವಾಳದ ದುರ್ಬಲ ಒಳಹರಿವು ಮತ್ತು ವ್ಯಾಪಾರ ಒಪ್ಪಂದದ ಅನಿಶ್ಚಿತತೆ ರೂಪಾಯಿಯ ಮೇಲೆ ಒತ್ತಡ ಹೆಚ್ಚಿಸಿವೆ ಎಂದು ʼರಾಯಿಟರ್ಸ್ʼ ವರದಿ ಮಾಡಿದೆ.

ಮಂಗಳವಾರ ರೂಪಾಯಿ ಹಿಂದಿನ ದಾಖಲೆ ಮಟ್ಟದ ಕುಸಿತ 89.9 ರೂಪಾಯಿ ಗೆ ತಲುಪಿತ್ತು. 2025ರಲ್ಲಿ ಈಗಾಗಲೇ 5% ಮೌಲ್ಯ ಕಳೆದುಕೊಂಡಿರುವ ರೂಪಾಯಿ, 2022ರ ಬಳಿಕ ಒಂದೇ ವರ್ಷದಲ್ಲಿ ಅತೀ ದೊಡ್ಡ ಕುಸಿತದತ್ತ ಸಾಗಿದೆ. ಇದರ ಪರಿಣಾಮ ಈ ವರ್ಷ ರೂಪಾಯಿ ಏಷ್ಯಾದಲ್ಲಿ ಅತ್ಯಂತ ದುರ್ಬಲ ಕುಸಿತಕಂಡ ಕರೆನ್ಸಿಯಾಗಿ ಪರಿಣಮಿಸಿದೆ.

ಬಲವಾದ ಆರ್ಥಿಕ ಬೆಳವಣಿಗೆಯ ನಡುವೆಯೇ ಕರೆನ್ಸಿ ಮಾರುಕಟ್ಟೆ ತೀವ್ರ ಅಸ್ಥಿರತೆಯಲ್ಲಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ 8.2% ಬೆಳವಣಿಗೆ ದಾಖಲಿಸಿದ್ದು, ಹಿಂದಿನ ತ್ರೈಮಾಸಿಕದ 7.8% ಗಿಂತ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬೆಳವಣಿಗೆ 5.6% ಇತ್ತು ಎಂದು ರಾಷ್ಟ್ರೀಯ ಅಂಕಿ ಅಂಶ ಕಚೇರಿ ಬಿಡುಗಡೆ ಮಾಡಿದ ಡೇಟಾ ತೋರಿಸಿದೆ.

ಉಕ್ರೇನ್ ಯುದ್ಧದ ನಡುವೆ ರಷ್ಯಾದ ತೈಲವನ್ನು ಭಾರತ ಖರೀದಿಸುತ್ತಿದೆ ಎಂದು ಆರೋಪಿಸಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್‌ ನಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ಕ್ಕೆ ದ್ವಿಗುಣಗೊಳಿಸಿದ್ದರು. ಇದರಿಂದ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದ್ದು, ಕರೆನ್ಸಿ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿತು.

ನ. 10 ರಂದು ಟ್ರಂಪ್, ಭಾರತದ ಮೇಲಿನ ಸುಂಕಗಳನ್ನು ಕೆಲವು ಹಂತಗಳಲ್ಲಿ ಕಡಿಮೆ ಮಾಡುವ ಆಶ್ವಾಸನೆ ನೀಡಿದರು. ರಷ್ಯಾ ತೈಲದ ಖರೀದಿಯನ್ನು ಭಾರತ ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಭಾರತದೊಂದಿಗೆ ನ್ಯಾಯಯುತ ಒಪ್ಪಂದವು ಸನ್ನಿಹಿತ ಎಂದು ಟ್ರಂಪ್ ಹೇಳಿದ್ದಾರೆ.

ಆದರೂ, ವ್ಯಾಪಾರ ಒಪ್ಪಂದದ ಘೋಷಣೆಯಲ್ಲಿ ವಿಳಂಬ ಉಂಟಾಗಿರುವುದು ಮತ್ತು ರಫ್ತು ಕ್ಷೇತ್ರದಲ್ಲಿನ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮಾರುಕಟ್ಟೆಗಳಲ್ಲಿ ಕೋಲಾಹಲ ಉಂಟುಮಾಡಿದೆ ಎಂದು Financial Express ವರದಿ ಮಾಡಿದೆ.

ಈ ವೇಳೆ ವಿದೇಶಿ ಹೂಡಿಕೆದಾರರು ಈ ವರ್ಷ ಭಾರತೀಯ ಷೇರು ಮಾರುಕಟ್ಟೆಯಿಂದ 16 ಶತಕೋಟಿ ಡಾಲರ್ ಗಿಂತ ಹೆಚ್ಚು ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ. ಸರಕು ವ್ಯಾಪಾರ ಕೊರತೆ ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಬುಧವಾರದಿಂದ ಮೂರು ದಿನಗಳ ಸಭೆ ಆರಂಭಿಸಿದ್ದು, ಬಡ್ಡಿದರ ಪರಿಷ್ಕರಣೆಯ ಕುರಿತ ಅಂತಿಮ ನಿರ್ಧಾರ ಶುಕ್ರವಾರ ಪ್ರಕಟವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries