ಗುವಾಹಟಿ: 'ರಾಜ್ಯದ ಪ್ರಮುಖ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್.ಟಿ) ಸ್ಥಾನಮಾನ ನೀಡುವ ವರದಿ ಅಂಗೀಕರಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಎಲ್ಲ ಜನರನ್ನು ತೃಪ್ತಿಪಡಿಸಲಾಗಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ವರದಿಯು ಅಸ್ಪಷ್ಟವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಅವರು, ಎಲ್ಲ ವಿಚಾರಗಳಿಗೆ ಬೆಂಬಲ ಹಾಗೂ ಅಸಮ್ಮತಿ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ತಾಯಿ ಅಹೋಮ್, ಚುಟಿಯಾ, ಮೋರಾನ್, ಮಟಕ್, ಕೋಚ್ ರಾಜಬೊಂಗ್ಸಿ ಹಾಗೂ ಚಾಯ್ ಬಗಾನ್ ಸಮುದಾಯಗಳಿಗೆ ಎಸ್.ಟಿ ಸ್ಥಾನಮಾನ ನೀಡುವ ಬೇಡಿಕೆ ಕುರಿತು ಸಚಿವರ ತಂಡವು ತಮ್ಮ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಮಂಡಿಸಿತು. ಈ ಸಮುದಾಯಗಳಿಗೆ ಎಸ್.ಟಿ ಮಾನ್ಯತೆ ಸಿಕ್ಕರೆ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ದೊರೆಯಲಿದೆ.
'ವರದಿ ಬಹಿರಂಗಗೊಂಡಿದ್ದು, ಯಾರೂ ಬೇಕಾದರು ವೀಕ್ಷಿಸಬಹುದು. ಈ ವರದಿಯು ಸಮಾಜದ ಎಲ್ಲ ವರ್ಗದ ಜನರನ್ನು ಸಂತೃಪ್ತಿಪಡಿಸಲಿದೆ' ಎಂದು ಶರ್ಮಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶ: ಸರ್ಕಾರದ ನಿರ್ಧಾರವನ್ನು ಖಂಡಿಸಿ ಬೊಡೊ ಸಮುದಾಯದ ವಿದ್ಯಾರ್ಥಿಗಳು ಶನಿವಾರ ಬೊಡೊಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೊಡೊಲ್ಯಾಂಡ್ ಪ್ರಾದೇಶಿಕ ಕಚೇರಿಯ (ಬಿಟಿಸಿ) ಆವರಣಕ್ಕೆ ನುಗ್ಗಿ ಪಿಠೋಪಕರಣಗಳನ್ನು ಮುರಿದು, ಹೂಕುಂಡಗಳನ್ನು ನಾಶಪಡಿಸಿದರು.
ಅಸ್ಸಾಂನ ಪರಿಶಿಷ್ಟ ಪಂಗಡದಲ್ಲಿ ಸದ್ಯ 'ಬೊಡೊ' ಅತೀ ದೊಡ್ಡ ಸಮುದಾಯವಾಗಿದ್ದು, ಹೊಸ ಸಮುದಾಯಗಳ ಸೇರ್ಪಡೆಯಿಂದ ಸ್ಪರ್ಧೆ ಹೆಚ್ಚಾಗಿ ಅವಕಾಶ ಕಡಿಮೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದೇವವ್ರತ ಸೈಕಿಯಾ ವಿಧಾನಸಭೆ ವಿರೋಧ ಪಕ್ಷದ ನಾಯಕರಾಜ್ಯ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವ ಇಚ್ಚೆ ಇಲ್ಲ. ಹೀಗಾಗಿಯೇ ಅಸ್ಪಷ್ಟ ವರದಿಯನ್ನು ಮಂಡಿಸಿ ಉಳಿದ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಬಿಡಲಾಗಿದೆ ರಫಿಕುಲ್ ಇಸ್ಲಾಂ ಎಐಯುಡಿಎಫ್ ನಾಯಕಆರು ಸಮುದಾಯಗಳಿಗೆ ಎಸ್.ಟಿ ಸ್ಥಾನಮಾನ ನೀಡುವ ಯಾವ ಉದ್ದೇಶವೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇಲ್ಲ.




