ತಿರುವನಂತಪುರಂ: ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕ್ರಮ ಎದುರಿಸುತ್ತಿರುವ, ಸದ್ಯ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ರಾಹುಲ್ ಮಾಂಕೂಟತ್ತಿಲ್ ರನ್ನು ಸುತ್ತುವರಿದಿರುವ ವಿವಾದದಿಂದ ಕೇರಳ ಕಾಂಗ್ರೆಸ್ ಘಟಕ ಅಂತರ ಕಾಯ್ದುಕೊಂಡಿದೆ.
ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಈಗಾಗಲೇ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಕೇರಳ ಕಾಂಗ್ರೆಸ್ ಘಟಕ ಸ್ಪಷ್ಟಪಡಿಸಿದೆ.
ನಾವು ಶಾಸಕ ರಾಹುಲ್ ಮಾಂಕೂಟತ್ತಿಲ್ ವಿವಾದದಿಂದ ಪಲಾಯನ ಮಾಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದರೆ, "ರಾಹುಲ್ ಮಾಂಕೂಟತ್ತಿಲ್ ಈಗಾಗಲೇ ಪಕ್ಷದಿಂದ ಅಮಾನತುಗೊಂಡಿರುವುದರಿಂದ, ಅವರ ಚಟುವಟಿಕೆಗಳ ಕುರಿತು ಹೇಳಲೇನೂ ಉಳಿದಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಶಾಸಕ ರಾಹುಲ್ ಮಾಂಕೂಟತ್ತಿಲ್ ವಿವಾದದ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಸ್ಪಷ್ಟತೆಯಿಲ್ಲ ಎಂದು ಆರೋಪಿಸಿರುವ ಸಿಪಿಎಂನ ಹಿರಿಯ ನಾಯಕ ಹಾಗೂ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, "ರಾಹುಲ್ ಮಾಂಕೂಟತ್ತಿಲ್ ರನ್ನು ಪಕ್ಷದಿಂದ ಉಚ್ಚಾಟಿಸಿದರೆ, ಪಕ್ಷದ ವರ್ಚಸ್ಸು ಕುಂದಬಹುದು ಎಂಬ ಕಾರಣಕ್ಕೆ ಪ್ರತಿ ವಿಷಯದ ಕುರಿತು ಧ್ವನಿ ಎತ್ತುವ ಕಾಂಗ್ರೆಸ್ ನಾಯಕರು, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ", ಎಂದು ದೂರಿದ್ದಾರೆ.
ಇದಕ್ಕೂ ಮುನ್ನ ಶಾಸಕ ರಾಹುಲ್ ಮಾಂಕೂಟತ್ತಿಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪರಿಣಾಮ, ನಾನು ಬಲವಂತವಾಗಿ ಗರ್ಭಪಾತ ಮಾಡಿಸಿಕೊಳ್ಳಬೇಕಾಯಿತು ಎಂದು ಶುಕ್ರವಾರ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.




