ತಿರುವನಂತಪುರಂ: 'ದಿತ್ವಾ' ಚಂಡಮಾರುತದ ಕಾರಣದಿಂದ ಶ್ರೀಲಂಕಾದ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿರುವ ಭಾರತೀಯರಿಗೆ ಅಗತ್ಯ ನೆರವು ನೀಡಬೇಕೆಂದು ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರ ಬರೆದಿದ್ದಾರೆ.
'ಚಂಡಮಾರುತದ ಪರಿಣಾಮವಾಗಿ ಕೊಲಂಬೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೇರಳದವರೂ ಸೇರಿದಂತೆ ಸುಮಾರು 300 ಭಾರತೀಯ ಪ್ರಯಾಣಿಕರು ಅತಂತ್ರರಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಅವರಿಗೆ ಸರಿಯಾದ ಆಹಾರ ನೀರು ಮತ್ತು ಅಗತ್ಯ ಸೌಲಭ್ಯವಿಲ್ಲ' ಎಂದು ತಿಳಿಸಿದ್ದಾರೆ. 'ಅತಂತ್ರವಾಗಿರುವ ಪ್ರಯಾಣಿಕರ ಬಗ್ಗೆ ಕಳವಳ ಉಂಟಾಗಿದೆ. ಅವರಿಗೆ ನೆರವು ನೀಡಲು ಕೇರಳ ಸರ್ಕಾರ ಸಿದ್ಧವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಲಿ' ಎಂದು ಹೇಳಿದ್ದಾರೆ.




