HEALTH TIPS

ಪೊಲೀಸರ ಬಗ್ಗೆ ಇರುವ ಗ್ರಹಿಕೆ ಬದಲಾಗಬೇಕು: ಪ್ರಧಾನಿ ನರೇಂದ್ರ ಮೋದಿ

ರಾಯಪುರ: 'ಪೊಲೀಸರ ಕುರಿತು ಜನರಲ್ಲಿ ಪ್ರಮುಖವಾಗಿ ಯುವಕರಲ್ಲಿರುವ ಗ್ರಹಿಕೆ ಬದಲಾಗಬೇಕು. ವೃತ್ತಿಪರತೆ, ಸೂಕ್ಷ್ಮತೆ ಮತ್ತು ಜನರೊಂದಿಗೆ ಬೆರೆಯುವ, ಸ್ಪಂದಿಸುವ ನಡವಳಿಕೆಗಳಿಂದ ಮಾತ್ರವೇ ಗ್ರಹಿಕೆ ಬದಲಾವಣೆ ಸಾಧ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಇಲ್ಲಿ ನಡೆದ 60ನೇ ಅಖಿಲ ಭಾರತ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ (ಡಿಜಿ-ಐಜಿಪಿ) ಸಮ್ಮೇಳನದಲ್ಲಿ ಅವರು ಭಾನುವಾರ ಮಾತನಾಡಿದರು. 'ವಿಕಸಿತ ಭಾರತ: ಭದ್ರತಾ ಆಯಾಮಗಳು' ಎಂಬುದು ಈ ಬಾರಿಯ ವಿಷಯವಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಭಾಗವಹಿಸಿದ್ದರು.

ನಿಷೇಧಿತ ಸಂಘಟನೆಗಳ ಮೇಲೆ ನಿಗಾ ವಹಿಸುವುದು, ನಕ್ಸಲ್‌ ಮುಕ್ತ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯನ್ನು ಖಾತರಿಪಡಿಸುವುದು ಮತ್ತು ಕರಾವಳಿ ಭದ್ರತೆಗಾಗಿ ಹೊಸ ಮಾದರಿಗಳನ್ನು ಅನುಸರಿಸುವುದು ಸೇರಿ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಪೊಲೀಸರಿಗೆ ಕಿವಿ ಮಾತು ಹೇಳಿದರು.

'ಮನುಷ್ಯರು ವಾಸವಿಲ್ಲದ ದ್ವೀಪಗಳ ಮಾಹಿತಿಗಳೂ ಸೇರಿ ದೇಶದ ಎಲ್ಲ ಪ್ರದೇಶಗಳ ಮಾಹಿತಿಗಳಿರುವ ರಾಷ್ಟ್ರೀಯ ಗುಪ್ತಚರ ಗ್ರಿಡ್‌ (ನ್ಯಾಟ್‌ಗ್ರಿಡ್‌: ನ್ಯಾಷನಲ್‌ ಇಂಟೆಲಿಜನ್ಸ್‌ ಗ್ರಿಡ್‌) ಡಾಟಾಬೇಸ್‌ಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ತುರ್ತಿನ ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ಸುಲಭದಲ್ಲಿ ವರ್ಗೀಕರಿಸಿ, ಸಂಗ್ರಹಿಸಿ ಕೊಡುವಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು' ಎಂದರು.

'ನಗರ ಪ್ರದೇಶಗಳಲ್ಲಿನ ಪೊಲೀಸರ ಕಾರ್ಯವೈಖರಿಯನ್ನು ಶಕ್ತಿಯುತಗೊಳಿಸಬೇಕಾದ ಅಗತ್ಯವಿದೆ. ಜೊತೆಗೆ, ಪ್ರವಾಸಿಗರ ಭದ್ರತೆಗಾಗಿ ಇರುವ ಪೊಲೀಸ್‌ ಪಡೆಗೆ ಹೊಸ ಜೀವ ನೀಡಬೇಕಿದೆ' ಎಂದರು.

ಉತ್ತಮವಾಗಿ ಕಾರ್ಯನಿರ್ವಹಿಸಿದ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಪದಕಗಳನ್ನು ವಿತರಿಸಿದರು. ಕಾನೂನು ಸುವ್ಯವಸ್ಥೆಯು ಉತ್ತಮ ರೀತಿಯಲ್ಲಿದ್ದ ನಗರಗಳನ್ನು ಗುರುತಿಸುವ, ಆ ನಗರಕ್ಕೆ ಪ್ರಶಸ್ತಿ ನೀಡುವ ಪರಿಪಾಟ ಆರಂಭವಾಗಿದ್ದು, ಮೊದಲ ಮೂರು ನಗರಗಳಿಗೆ ಪ್ರಧಾನಿ ಮೋದಿ ಅವರು ಇದೇ ವೇಳೆ ಪ್ರಶಸ್ತಿ ವಿತರಿಸಿದರು.

ದೇಶದಾದ್ಯಂತ ಇರುವ ಎಲ್ಲ ಡಿಜಿ-ಐಜಿಪಿಗಳು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಮತ್ತು ಕೇಂದ್ರ ಪೊಲೀಸ್‌ ಸಂಸ್ಥೆಗಳ ಮುಖ್ಯಸ್ಥರು ಸಮ್ಮೇಳನದಲ್ಲಿ ಹಾಜರಿದ್ದರು. 700ಕ್ಕೂ ಹೆಚ್ಚು ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries