HEALTH TIPS

ಚೀನಾದೊಂದಿಗೆ ಭೀಕರ ಘರ್ಷಣೆಯ ಐದು ವರ್ಷಗಳ ಬಳಿಕ ಗಲ್ವಾನ್ ನಲ್ಲಿ ಯುದ್ಧ ಸ್ಮಾರಕ ಅನಾವರಣ

ಲೇಹ್: ಐದು ವರ್ಷಗಳ ಹಿಂದೆ ಚೀನಿ ಸೈನಿಕರೊಂದಿಗೆ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರವಿವಾರ ಅನಾವರಣಗೊಳಿಸಿದರು. ಇದು ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ನಿರ್ಮಾಣಗೊಂಡ ಯುದ್ಧ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಲಡಾಖ್ ನ ಆಯಕಟ್ಟಿನ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯಲ್ಲಿ ಕೆಎಂ-120 ಪೋಸ್ಟ್ ನ ಬಳಿ ಸ್ಮಾರಕವು ತಲೆಯೆತ್ತಿದ್ದು, ಇದು ವಿಶ್ವದ ಅತ್ಯಂತ ಕಠಿಣ ಮಿಲಿಟರಿ ನಿಯೋಜನೆ ವಲಯಗಳಲ್ಲಿ ಒಂದಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನ, ಕಡಿಮೆ ಆಮ್ಲಜನಕ ಮಟ್ಟಗಳು ಮತ್ತು ಪ್ರತಿಕೂಲ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ.

ಸೇನಾ ದಿನದಂದು ಘೋಷಿಸಲಾಗಿದ್ದ 'ಭಾರತ ರಣಭೂಮಿ ದರ್ಶನ' ಉಪಕ್ರಮದಡಿ ಸ್ಮಾರಕವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಉಪಕ್ರಮವು ಪ್ರಮುಖ ಯುದ್ಧಭೂಮಿಗಳಿಗೆ ಭೇಟಿ ನೀಡಲು,ತಮ್ಮ ಗೌರವ ಸಲ್ಲಿಸಲು ಮತ್ತು ರಾಷ್ಟ್ರಸೇವೆಯಲ್ಲಿ ಮಾಡಿದ ತ್ಯಾಗದ ಮಹತ್ವವನ್ನು ಗ್ರಹಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುತ್ತದೆ.

ತ್ಯಾಗ ಮತ್ತು ಶೌರ್ಯವನ್ನು ಸಂಕೇತಿಸುವ ಕೆಂಪು ಮತ್ತು ಬಿಳಿ ಗ್ರಾನೈಟ್ ಬಳಿಸಿ ನಿರ್ಮಿಸಲಾಗಿರುವ ಸ್ಮಾರಕವು ತ್ರಿಶೂಲ ಮತ್ತು ಡಮರು ರೂಪವನ್ನು ಹೊಂದಿದೆ. ಸ್ಮಾರಕದ ಮಧ್ಯಭಾಗದಲ್ಲಿ ಶಕ್ತಿಯನ್ನು ಪ್ರತಿನಿಧಿಸುವ ತ್ರಿಕೋನ ಸ್ಥಾಪನೆ,ಶಾಶ್ವತ ಜ್ವಾಲೆ ಮತ್ತು ರಾಷ್ಟ್ರಧ್ವಜದಿಂದ ಸುತ್ತುವರಿಯಲ್ಪಟ್ಟಿರುವ ಪರ್ವತಗಳಿವೆ. ಸ್ಮಾರಕದ ಸುತ್ತ ಗಲ್ವಾನ್ ಕಣಿವೆಯ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದ ಯೋಧರನ್ನು ಪ್ರತಿನಿಧಿಸುವ 20 ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಯುದ್ಧ ಸ್ಮಾರಕ ಸಂಕೀರ್ಣವು ಗಲ್ವಾನ್ ಘರ್ಷಣೆ,ಲಡಾಖ್ ನ ಮಿಲಿಟರಿ ಇತಿಹಾಸ ಮತ್ತು ತಲೆಮಾರುಗಳಾದ್ಯಂತ ಧೈರ್ಯದ ಪರಂಪರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯ ಮತ್ತು ಡಿಜಿಟಲ್ ಗ್ಯಾಲರಿಯನ್ನು ಒಳಗೊಂಡಿದೆ. ಶೌರ್ಯ ಕಥನಗಳನ್ನು ಪ್ರದರ್ಶಿಸಲು ಸಭಾಂಗಣವೊಂದನ್ನು ಸಹ ನಿರ್ಮಿಸಲಾಗಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ಸೇನೆಯು ಮೂರು ಕೆಫೆಗಳು,ಸ್ಮರಣಿಕೆಗಳ ಮಳಿಗೆ,ಸೆಲ್ಫಿ ಪಾಯಿಂಟ್ ಮತ್ತು ಸೇನಾ ಮಾದರಿಯ ಮಾಹಿತಿ ಕೇಂದ್ರ ಸೇರಿದಂತೆ ಸೌಲಭ್ಯಗಳನ್ನು ಸ್ಥಾಪಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries