HEALTH TIPS

MGNREGA ರದ್ದು ಮಾಡುವ ಮೂಲಕ ಮೋದಿ ಸರ್ಕಾರ ಬಡವರ ಬೆನ್ನಿಗೆ ಇರಿದಿದೆ: ಖರ್ಗೆ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಸರ್ಕಾರದ ಅವಧಿಯ ದೂರದೃಷ್ಟಿಯ ಕಾರ್ಯಕ್ರಮ ಎಂಜಿಎನ್‌ಆರ್‌ಇಜಿಎಯನ್ನು ರದ್ದುಗೊಳಿಸುವ ಮೂಲಕ ಬೆನ್ನಿಗೆ ಇರಿದಿದ್ದಾರೆ ಎಂದು ಆರೋಪಿಸಿದ್ದಾರೆ.


ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ತಮ್ಮ ಭಾಷಣದಲ್ಲಿ, 'ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆಯಿಂದ ದೇಶದ ಒಂದು ಪೀಳಿಗೆ ಬಡತನದಿಂದ ಪಾರಾಗಿತ್ತು. ಆದರೆ, ಯಾವುದೇ ಅಧ್ಯಯನ ಅಥವಾ ಮೌಲ್ಯಮಾಪನವಿಲ್ಲದೆ, ರಾಜ್ಯಗಳು ಅಥವಾ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ, ಮೂರು ಕರಾಳ ಕೃಷಿ ಕಾನೂನುಗಳನ್ನು ತರಲು ಬಳಸಿದ ಅದೇ ವಿಧಾನವನ್ನು ಅನುಸರಿಸಿ 'ವಿಬಿ-ಜಿ ರಾಮ್‌ ಜಿ' ಕಾಯ್ದೆಯನ್ನು ಹೇರಲಾಗಿದೆ' ಎಂದು ವಾಗ್ದಾಳಿ ನಡೆಸಿದರು.

'ಮೋದಿ ಸರ್ಕಾರ ಎಂಜಿಎನ್‌ಆರ್‌ಇಜಿಎಯನ್ನು ರದ್ದುಗೊಳಿಸಿದೆ. ಇದು ಕೋಟ್ಯಂತರ ಬಡ ಮತ್ತು ದುರ್ಬಲ ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಮೋದಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದು ಅವರ ಬೆನ್ನಿಗೆ ಇರಿದಿದೆ. ಎಂಜಿಎನ್‌ಆರ್‌ಇಜಿಎ ರದ್ದುಗೊಳಿಸಿರುವುದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಗೆ ಮಾಡಿದ ಅವಮಾನ'ಎಂದು ಅವರು ಹೇಳಿದ್ದಾರೆ.

'ಯಾವುದೇ ಸರ್ವಾಧಿಕಾರಿ ಜನರ ಹಕ್ಕುಗಳನ್ನು ಕಸಿಯಲು ಸಾಧ್ಯವಿಲ್ಲ ಎಂದು 76 ವರ್ಷಗಳಲ್ಲಿ ಸಂವಿಧಾನ ನಮಗೆ ಕಲಿಸಿದೆ. ಒಉಓಖಇಉಂ ರದ್ದು ವಿರುದ್ಧ ನಿರ್ದಿಷ್ಟ ಹೋರಾಟದ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ರಾಷ್ಟ್ರವ್ಯಾಪಿ ಸಾಮೂಹಿಕ ಆಂದೋಲನ ಮಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಾವು ಈ ಯುದ್ಧದಲ್ಲಿ ಗೆಲ್ಲುತ್ತೇವೆ'ಎಂದು ಅವರು ಹೇಳಿದ್ದಾರೆ.

ಮೋದಿ ಸರ್ಕಾರವು ಕೆಲವೇ ಕೆಲವು ದೊಡ್ಡ ಬಂಡವಾಳಶಾಹಿಗಳ ಲಾಭದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ ಎಂದು ಆರೋಪಿಸಿದ ಅವರು, ನರೇಗಾ ಯೋಜನೆಯು ಗ್ರಾಮೀಣ ಭಾರತದ ಸ್ಥಿತಿಯನ್ನೇ ಪರಿವರ್ತಿಸಿತು. ದುಡಿಮೆಗಾಗಿ ಜನರ ವಲಸೆಯನ್ನು ತಡೆಯಿತು ಮತ್ತು ಗ್ರಾಮಗಳನ್ನು ಬರ, ಹಸಿವು ಹಾಗೂ ಶೋಷಣೆಯಿಂದ ಮುಕ್ತಗೊಳಿಸಿತು. ಇದು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಭೂಹೀನ ಕಾರ್ಮಿಕರಿಗೆ ಬಡತನದ ವಿರುದ್ಧದ ಹೋರಾಟದಲ್ಲಿ ಸರ್ಕಾರವು ತಮ್ಮೊಂದಿಗೆ ನಿಂತಿದೆ ಎಂಬ ವಿಶ್ವಾಸವನ್ನು ನೀಡಿತ್ತು ಎಂದು ಅವರು ಹೇಳಿದ್ದಾರೆ.

'ಇಂದು, ಭಾರತದಲ್ಲಿ ನರೇಗಾದಿಂದಾಗಿ ಬಡತನದಿಂದ ಪಾರಾದ ಇಡೀ ಪೀಳಿಗೆ ಇದೆ. ಅವರು ಶಾಲೆಗಳಿಗೆ ಹೋಗಿ ಶಿಕ್ಷಣ ಪಡೆದು ಘನತೆಯಿಂದ ಬದುಕುತ್ತಿದ್ದಾರೆ'ಎಂದು ಖರ್ಗೆ ತಿಳಿಸಿದ್ದಾರೆ.

ನರೇಗಾ ಯೋಜನೆ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಅವರು, 2015ರಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಭೂಸ್ವಾಧೀನ ಕಾನೂನಿನಲ್ಲಿನ ಬದಲಾವಣೆಗಳ ವಿರುದ್ಧ ಕಾಂಗ್ರೆಸ್ ಬೀದಿಗಿಳಿದು ಸರ್ಕಾರವನ್ನು ಹಿಮ್ಮೆಟ್ಟುವಂತೆ ಮಾಡಿತು ಎಂದು ನೆನಪಿಸಿಕೊಂಡರು. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳನ್ನು ಸಹ ಅವರು ಮೆಲುಕು ಹಾಕಿದರು.

ಪಕ್ಷದ ಸಂಘಟನೆಯ ದೃಷ್ಟಿಯಿಂದ, ದೇಶದಾದ್ಯಂತ ಸುಮಾರು 500 ಜಿಲ್ಲೆಗಳಲ್ಲಿ ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಮುಂದಿನ 120 ದಿನಗಳಲ್ಲಿ, ಉಳಿದ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದರು.

'ನಾವು ರಾಜ್ಯ, ಜಿಲ್ಲೆ, ಬ್ಲಾಕ್, ಮಂಡಲ ಮತ್ತು ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಸಕ್ರಿಯ, ಜವಾಬ್ದಾರಿಯುತ ಮತ್ತು ಹೋರಾಟಾತ್ಮಕವಾಗಿಸಬೇಕು' ಎಂದು ಕರೆ ನೀಡಿದರು.

'ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ 2026ರ ಏಪ್ರಿಲ್-ಮೇ ಚುನಾವಣೆಗಳು ನಡೆಯಲಿವೆ. ಅದಕ್ಕಾಗಿ ನಮ್ಮ ಸಿದ್ಧತೆಗಳು ನಡೆಯುತ್ತಿವೆ. ನಾವು ಈ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸುತ್ತೇವೆ. ಪ್ರಜಾಪ್ರಭುತ್ವವನ್ನು ಬಲಪಡಿಸುತ್ತೇವೆ'ಎಂದು ಅವರು ಹೇಳಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries