HEALTH TIPS

Winter Session: SIR, ರಾಷ್ಟ್ರೀಯ ಭದ್ರತೆ ಚರ್ಚೆಗೆ ವಿಪಕ್ಷಗಳ ಪಟ್ಟು

ನವದೆಹಲಿ: ಡಿಸೆಂಬರ್ 1ರಿಂದ (ಸೋಮವಾರ) ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಚರ್ಚೆಗೆ ಆದ್ಯತೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಈ ನಡುವೆ ಸಂಸತ್ತಿನ ಸುಗಮ ಕಾರ್ಯಕಲಾಪಕ್ಕಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ.

ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರ ಕರೆದ ಸರ್ವಪಕ್ಷ ಸಭೆಯಲ್ಲಿ 36 ರಾಜಕೀಯ ಪಕ್ಷಗಳ 50 ನಾಯಕರು ಹಾಜರಿದ್ದರು.

ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಸಚಿವ ಜೆ.ಪಿ. ನಡ್ಡಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಸಭೆಯಲ್ಲಿ ಎಸ್‌ಐಆರ್ ಹೊರತಾಗಿ ದೆಹಲಿ ಸ್ಫೋಟದ ಬಳಿಕ ಉಂಟಾಗಿರುವ ರಾಷ್ಟ್ರೀಯ ಭದ್ರತೆ ಕಳವಳ ಮತ್ತು ಕಾರ್ಮಿಕ ಸಂಹಿತೆ ಕುರಿತಾದ ವಿಷಯಗಳನ್ನು ನಾಯಕರು ಪ್ರಸ್ತಾಪಿಸಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಕಲಾಪಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಸಂಸತ್ತಿನ ಘನತೆ ಹೆಚ್ಚುತ್ತದೆ. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಕಿರಣ್ ರಿಜಿಜು ಮನವಿ ಮಾಡಿದ್ದಾರೆ.

ಎಸ್‌ಐಆರ್ ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಬೇಡಿಕೆ ಪರಿಗಣಿಸಲಾಗುತ್ತದೆಯೇ ಎಂದು ಕೇಳಿದಾಗ ಕಾರ್ಯಸೂಚಿಯನ್ನು ಕಲಾಪ ಸಲಹಾ ಸಮಿತಿ ಸಭೆ (ಬಿಎಸಿ) ನಿರ್ಧರಿಸುತ್ತದೆ ಎಂದಷ್ಟೇ ಹೇಳಿದ್ದಾರೆ.

ಈ ನಡುವೆ ಸರ್ವಪಕ್ಷ ಸಭೆ ಕೇವಲ ಔಪಚಾರಿಕತೆಗೆ ಸೀಮಿತವಾಗಿತ್ತು. ಪ್ರತಿಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ದೂರಿದ್ದಾರೆ.

ಏತನ್ಮಧ್ಯೆ ಆರಂಭವಾಗುವ ಚಳಿಗಾಲದ ಮುನ್ನಾದಿನವೇ ಎಸ್‌ಐಆರ್‌ ಪ್ರಕ್ರಿಯೆಯ ಗಡುವು ವಿಸ್ತರಿಸುವ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries