ಮನರೇಗಾ ಬದಲಿಗೆ ತರಲಾಗಿರುವ ವಿಬಿ-ಜಿ-ರಾಮ್ ಜಿ ಕಾಯ್ದೆಯನ್ನು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ಜಾರಿಗೊಳಿಸದಿರುವುದು ಸೇರಿದಂತೆ 'ಎಲ್ಲ ಆಯ್ಕೆಗಳನ್ನು' ತಾನು ಅನ್ವೇಷಿಸುವುದಾಗಿ ಕಾಂಗ್ರೆಸ್ ಹೇಳಿದೆ.
ರಾಜ್ಯಗಳು ಶೇ.40ರಷ್ಟು ಯೋಜನಾ ವೆಚ್ಚವನ್ನು ಭರಿಸುವುದನ್ನು ಕಡ್ಡಾಯಗೊಳಿಸಿರುವ 'ಪೂರೈಕೆ ಆಧಾರಿತ' ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತರಲು 'ಬೇಡಿಕೆ ಆಧಾರಿತ, ಹಕ್ಕು ಆಧಾರಿತ' ಮನರೇಗಾದ ರದ್ದತಿಯ ವಿರುದ್ಧ ಪ್ರತಿಭಟಿಸುವಂತೆ ಕೋರಿ ತಾನು ಇತರ ಪ್ರತಿಪಕ್ಷಗಳು ಮತ್ತು ಅವುಗಳ ನೇತೃತ್ವದ ಸರಕಾರಗಳನ್ನು ಸಂಪರ್ಕಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.
ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು, ಮನರೇಗಾವನ್ನು ಪುನಃಸ್ಥಾಪಿಸಬೇಕು ಹಾಗೂ ಕೆಲಸದ ಹಕ್ಕು ಮತ್ತು ಪಂಚಾಯತ್‌ಗಳ ಅಧಿಕಾರವನ್ನು ಮರಳಿಸಬೇಕು ಎಂದು ಪಕ್ಷವು ಸ್ಪಷ್ಟವಾಗಿ ಆಗ್ರಹಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದರು.
'ಮನರೇಗಾದ ಮೇಲೆ ದಾಳಿಯು ಕೋಟ್ಯಂತರ ಕಾರ್ಮಿಕರು ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿಯಾಗಿದೆ. ಪ್ರತಿ ಪಂಚಾಯತ್‌ನಿಂದ ಸಂಸತ್ತಿನವರೆಗೆ ನಾವು ಶಾಂತಿಯುತವಾಗಿ ಮತ್ತು ದೃಢವಾಗಿ ಪ್ರತಿರೋಧಿಸುತ್ತೇವೆ' ಎಂದು ಖರ್ಗೆ ಶನಿವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಜ.10ರಿಂದ ಫೆ.25ರವರೆಗೆ ಪ್ರತಿಭಟನೆ ಕಾರ್ಯಕ್ರಮವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು,ಮನರೇಗಾವನ್ನು 'ಕೊಲ್ಲುವುದು' ಮೋದಿ ಸರಕಾರದ ಸ್ಪಷ್ಟ ಹುನ್ನಾರವಾಗಿದೆ. ಸಾಂವಿಧಾನಿಕ ಭರವಸೆಯನ್ನು ಸರಕಾರಿ ಕಾರ್ಯಕ್ರಮವಾಗಿ ಪರಿವರ್ತಿಸಲಾಗುತ್ತಿದೆ ಮತ್ತು ಇನ್ನು ಮುಂದೆ ಉದ್ಯೋಗವು ಒಂದು ಹಕ್ಕು ಆಗಿ ಉಳಿಯುವುದಿಲ್ಲ ಎಂದು ಹೇಳಿದರು.
ಮನರೇಗಾ ಅತ್ಯಂತ ವಿಕೇಂದ್ರೀಕೃತ ಯೋಜನೆಯಾಗಿತ್ತು, ಆದರೆ ಪಂಚಾಯತ್‌ಗಳನ್ನು 'ಗುಮಾಸ್ತರ ಪಾತ್ರಕ್ಕೆ ಇಳಿಸುವ' ಮೂಲಕ ಈಗ ಸರಕಾರವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದರು.
ವಿಬಿ-ಜಿ ರಾಮ್ ಜಿ ಕಾಯ್ದೆಗೆ ಈಗ ರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳ ಗತಿಯೇ ಆಗಲಿದೆ ಎಂದು ಹೇಳಿದ ವೇಣುಗೋಪಾಲ್, ಜನವರಿ 10ರಂದು ಎಲ್ಲ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿಗಳೊಂದಿಗೆ ಪ್ರತಿಭಟನಾ ಕಾರ್ಯಕ್ರಮ ಆರಂಭವಾಗಲಿದ್ದು,ಬಳಿಕ ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಅಥವಾ ಮಹಾತ್ಮಾ ಗಾಂಧಿ ಅಥವಾ ಅಂಬೇಡ್ಕರ್ ಪ್ರತಿಮೆಗಳ ಬಳಿ ಒಂದು ದಿನದ ನಿರಶನ ನಡೆಯಲಿದೆ. ಜ.12ರಿಂದ 30ರ ನಡುವೆ ಎರಡನೇ ಹಂತದ ಪ್ರತಿಭಟನೆಯಲ್ಲಿ ಪಂಚಾಯತ್ ಮಟ್ಟದಲ್ಲಿ ಸಭೆಗಳು, ಎಲ್ಲ ಮನರೇಗಾ ಕಾರ್ಮಿಕರು, ಗ್ರಾಮ ಪ್ರಧಾನರು ಮತ್ತು ಇತರರಿಗೆ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಪತ್ರಗಳ ವಿತರಣೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ಸಭೆಗಳು ನಡೆಯಲಿವೆ. ಇದು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾದ ಜ.30ರಂದು ವಾರ್ಡ್ ಮಟ್ಟದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆಗಳೊಂದಿಗೆ ಮುಕ್ತಾಯಗೊಳ್ಳಲಿದೆ ಎಂದರು.
ಜ.31ರಿಂದ ಫೆ.15ರವರೆಗೆ ಮೂರನೇ ಹಂತದಲ್ಲಿ ಫೆ.6ರವರೆಗೆ ಜಿಲ್ಲಾ ಮಟ್ಟದಲ್ಲಿ ಧರಣಿಗಳು ಮತ್ತು ಫೆ.7ರಿಂದ 15ರ ನಡುವೆ ವಿಧಾನಸಭೆ ಅಥವಾ ರಾಜಭವನಗಳು ಅಥವಾ ಕೇಂದ್ರ ಸರಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಫೆ.16ರಿಂದ ಫೆ.25ರವರೆಗೆೆ ದೇಶಾದ್ಯಂತ ನಾಲ್ಕು ಬೃಹತ್ ರ್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

