ಲಕ್ನೋ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಸಂಬಂಧಿಸಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಶನಿವಾರ ರಾತ್ರಿ ಹಝರತ್‌ಗಂಜ್ ಪೊಲೀಸ್ ಠಾಣೆಗೆ ತೆರಳಿ ತನಿಖಾಧಿಕಾರಿ ಮುಂದೆ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ರಾಥೋಡ್ ಸ್ವತಃ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿ ಆಕೆಯ ಹೇಳಿಕೆಯನ್ನು ಪಡೆದರು. ಅಗತ್ಯವಿದ್ದಲ್ಲಿ ಇನ್ನಷ್ಟು ಹೇಳಿಕೆಯನ್ನು ದಾಖಲಿಸಲು ಅವರನ್ನು ಹಗಲಿನ ವೇಳೆ ಮತ್ತೆ ಕರೆಸಲಾಗುವುದು. ಆದರೆ ರಾತ್ರಿ ವೇಳೆ ಮಹಿಳೆಯನ್ನು ಬಂಧಿಸಲು ಕಾನೂನಿನಡಿ ಅವಕಾಶವಿಲ್ಲ ಎಂದು ಹಝರತ್‌ಗಂಜ್ ಸಹಾಯಕ ಪೊಲೀಸ್ ಆಯುಕ್ತ ವಿಕಾಸ್ ಜೈಸ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ,
ನೇಹಾ ಸಿಂಗ್ ರಾಥೋಡ್ ಜೊತೆ ಈ ವೇಳೆ ಪತಿ ಹಿಮಾಂಶು ಸಿಂಗ್ ಇದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಹಿಮಾಂಶು ಸಿಂಗ್, ಮೊದಲ ನೋಟಿಸ್ ಸುಮಾರು 15 ದಿನಗಳ ಹಿಂದೆ ಬಂದಿತ್ತು. ಆದರೆ ಆ ಸಮಯದಲ್ಲಿ ನೇಹಾ ಅಸ್ವಸ್ಥಳಾಗಿದ್ದರು. ನಾವು ಪೊಲೀಸರ ಬಳಿ ಸಮಯ ಕೋರಿದ್ದೆವು. ಎರಡನೇ ನೋಟಿಸ್‌ನಲ್ಲಿ ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದ್ದರಿಂದ ನಾವು ಇದು ಪೊಲೀಸ್ ಠಾಣೆಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

