'ಭಾರತವು ವೆನೆಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತದೆ. ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತ ಪಡಿಸಿಕೊಳ್ಳಲು ಮಾತುಕತೆಗಳ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ನಾವು ಸಂಬಂಧಿಸಿದ ಎಲ್ಲರಿಗೂ ಕರೆ ನೀಡುತ್ತೇವೆ' ಎಂದು ಸಚಿವಾಲಯವು ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು,ಸಾಧ್ಯವಿರುವ ಎಲ್ಲ ನೆರವು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಅದು ಹೇಳಿದೆ.
ವೆನೆಝುವೆಲಾದಲ್ಲಿನ ಬೆಳವಣಿಗೆಗಳ ನಡುವೆಯೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ವೆನೆಝುವೆಲಾಕ್ಕೆ ಅನಿವಾರ್ಯವಲ್ಲದ ಎಲ್ಲ ಪ್ರಯಾಣಗಳನ್ನು ತಪ್ಪಿಸುವಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿತ್ತು.
ಅತ್ಯಂತ ಎಚ್ಚರಿಕೆಯಿಂದಿರುವಂತೆ ಮತ್ತು ತಮ್ಮ ಚಲನವಲನಗಳನ್ನು ನಿರ್ಬಂಧಿಸುವಂತೆ ಅದು ವೆನೆಝವೆಲಾದಲ್ಲಿರುವ ಭಾರತೀಯರಿಗೂ ಸೂಚಿಸಿತ್ತು. ತುರ್ತು ಸಂಪರ್ಕಗಳಿಗಾಗಿ ಇಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನೂ ಅದು ಹಂಚಿಕೊಂಡಿತ್ತು.

