ವಾಷಿಂಗ್ಟನ್: ಮಾರಕ ಶೀತಗಾಳಿ ಶನಿವಾರ ಅಮೆರಿಕದ ಸಾಮಾನ್ಯ ಜನಜೀವನವನ್ನು ಅಲ್ಲೋಲಕಲ್ಲೋಲಗೊಳಿಸಿದೆ. ವಿದ್ಯುತ್ ಪೂರೈಕೆ ವ್ಯವಸ್ಥೆ ಹದಗೆಟ್ಟಿದ್ದು, ಪ್ರಮುಖ ಹೆದ್ದಾರಿಗಳು ಅಪಾಯಕಾರಿ ಮಂಜುಗಡ್ಡೆಯಿಂದ ಆವೃತವಾಗಿವೆ. 13 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ.
ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟು ಮಂದಿ, ಅಂದರೆ ಸುಮಾರು 14 ಕೋಟಿ ಜನರು ಈ ಶೀತಗಾಳಿಯ ಪರಿಣಾಮಕ್ಕೆ ಸಿಲುಕಿದ್ದಾರೆ. ನ್ಯೂ ಮೆಕ್ಸಿಕೋದಿಂದ ನ್ಯೂ ಇಂಗ್ಲೆಂಡ್‌ವರೆಗಿನ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಷ್ಟ್ರೀಯ ಹವಾಮಾನ ಸೇವೆಯ ಮುನ್ಸೂಚನೆಯಂತೆ, ವ್ಯಾಪಕ ಹಿಮಪಾತ ಸಂಭವಿಸುವ ಸಾಧ್ಯತೆ ಇದ್ದು, ಶನಿವಾರದಿಂದ ಸೋಮವಾರದವರೆಗೆ ದಕ್ಷಿಣದ ಪರ್ವತ ಪ್ರದೇಶಗಳಿಂದ ನ್ಯೂ ಇಂಗ್ಲೆಂಡ್‌ವರೆಗೂ ಗಾಳಿ ಹಾಗೂ ಮಳೆಯಾಗುವ ನಿರೀಕ್ಷೆಯಿದೆ.
"ಹಿಮ ಮತ್ತು ಮಂಜುಗಡ್ಡೆ ಅತ್ಯಂತ ನಿಧಾನವಾಗಿ ಕರಗುತ್ತಿದೆ. ಈ ಪ್ರವೃತ್ತಿ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳಿಲ್ಲ. ಇದರಿಂದ ಪರಿಸ್ಥಿತಿ ಸಾಮಾನ್ಯಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ," ಎಂದು ಹವಾಮಾನ ತಜ್ಞೆ ಅಲಿಸನ್ ಸೆಂಟೊರೆಲ್ಲಿ ತಿಳಿಸಿದ್ದಾರೆ.
ಈ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ ಅನುಮೋದನೆ ನೀಡಿದ್ದಾರೆ. ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (FEMA) ಅಗತ್ಯ ವಸ್ತುಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಶೋಧ ಹಾಗೂ ರಕ್ಷಣಾ ತಂಡಗಳು ಹಲವು ರಾಜ್ಯಗಳಿಗೆ ಧಾವಿಸಿವೆ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ತಿಳಿಸಿದ್ದಾರೆ.

