ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಆಹಾರ ಸಮಿತಿಯ ನೇತೃತ್ವದಲ್ಲಿ ತರಕಾರಿ ಕೃಷಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಮೈಸೂರಿನ ಸಜ್ಜೆಹುಂಡಿ ಹೊಂಬಾಳೇಶ್ವರ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಸಾವಯವ ತರಕಾರಿ ಕೃಷಿಗಾಗಿ ರೈತರಿಗೆ ವಿವಿಧ ವರ್ಗದ ತರಕಾರಿ ಬೀಜಗಳ ವಿತರಣೆ ನಡೆಯಿತು. ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನೊಂದಾವಣಾಧಿಕಾರಿ ಡಾ. ನವೀನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಷಮುಕ್ತ ಆಹಾರ ಭಗವದ್ಭಕ್ತರಿಗೆ ಲಭಿಸಬೇಕೆನ್ನುವ ಸದುದ್ದೇಶದಲ್ಲಿ ಪೆರಡಾಲ ಶ್ರೀ ಉದನೇಶ್ವರನ ಭಕ್ತರು ಮೈಸೂರಿನ ಶಿವಸನ್ನಿಧಿಗೆ ಆಗಮಿಸಿ ಇಲ್ಲಿನ ಭಗವದ್ಭಕ್ತರ ಸಹಕಾರದೊಂದಿಗೆ ಉತ್ತಮವಾದ ಕಾರ್ಯಕ್ಕೆ ತೊಡಗಿರುವುದು ಸಂತಸದ ವಿಚಾರವಾಗಿದೆ ಎಂದರು.
ಸಜ್ಜೆಹುಂಡಿ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಿದ್ಧರಾಮಯ್ಯ ಗುಡ್ಡಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಜ್ಯೋತಿಷಿ ಕುಂಜಾರು ವೆಂಕಟೇಶ್ವರ ಭಟ್ ಮೈಸೂರು ಮಾತನಾಡಿ, ಶಿವಪಾರ್ವತಿ ಎಂದರೆ ಭಗವದ್ಭಕ್ತರ ತಂದೆ ತಾಯಿಯ ಸ್ಥಾನದಲ್ಲಿರುವವರು. ಅಂತಹ ತಂದೆ ತಾಯಿಯ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಭಕ್ತರು ಶಿವನಸೇವೆಗೆ ಪಣತೊಟ್ಟಿರುವುದು ಶ್ಲಾಘನೀಯ ಎಂದರು.
ಪ್ರಶಾಂತ್ ಗುರೂಜಿ ಮೈಸೂರು ಶುಭಹಾರೈಸಿದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಕೀಲ ವೆಂಕಟರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಆಹಾರ ಸಮಿತಿಯ ಪ್ರಧಾನ ಸಂಚಾಲಕ ಗಣೇಶಕೃಷ್ಣ ಅಳಕ್ಕೆ, ಜೊತೆ ಕಾರ್ಯದರ್ಶಿ ಗಣೇಶ ಪ್ರಸಾದ್ ಕಡಪ್ಪು, ಪ್ರಚಾರ ಸಮಿತಿಯ ಸಂಚಾಲಕ ಶ್ಯಾಮಪ್ರಸಾದ ಸರಳಿ ಉಪಸ್ಥಿತರಿದ್ದರು. ಶಿವರಾಮ ಭಟ್ ಪಟ್ಟಾಜೆ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿದರು. ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಗವದ್ಭಕ್ತರ ಹಸಿವನ್ನು ನೀಗಿಸುವ ಸಲುವಾಗಿ ಸಾವಯವ ತರಕಾರಿಯನ್ನು ಬಳಸುವ ಉದ್ದೇಶವಿರಿಸಿ ಮೈಸೂರಿನ ಭಕ್ತರ ಸಹಕಾರದೊಂದಿಗೆ ತರಕಾರಿ ಬೆಳೆಗೆ ಬೀಜ ವಿತರಣೆಯನ್ನು ಮಾಡಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ತರಕಾರಿಗಳನ್ನು ಸಿದ್ಧಪಡಿಸುವಲ್ಲಿ ಇಲ್ಲಿನ 150ಕ್ಕೂ ಹೆಚ್ಚಿನ ಭಕ್ತರು ಈಗಾಗಲೇ ಸಿದ್ಧತೆಯನ್ನು ಆರಂಭಿಸಿದ್ದಾರೆ ಎಂದರು. ಕೃಷಿಕರಿಗೆ ತರಕಾರಿ ಬೀಜಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

.jpg)
.jpg)
