ಇಂದೋರ್: ಇಂದೋರ್‌ನ ಭಾರತೀಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾಗಿರುವ ಅತಿಸಾರದಿಂದಾಗಿ 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 11ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಸಾವಿರ ಮಂದಿಗೆ ತಪಾಸಣೆ ನಡೆಸಲಾಗಿದ್ದು, 20 ಮಂದಿಯಲ್ಲಿ ಮತ್ತೆ ಸೋಂಕು ಪತ್ತೆಯಾಗಿದೆ.
ಭಾರತೀಪುರದ 2,354 ಮನೆಗಳ 9,416 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಅಲ್ಲಿ ಈಗಾಗಲೇ ಕಲುಷಿತ ನೀರು ಸೇವೆನೆಯಿಂದ 6 ಮಂದಿ ಸಾವಿಗೀಡಾಗಿದ್ದಾರೆ. 20 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಂಕು ಪ್ರಾರಂಭವಾದ ಬಳಿಕ 398 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 256 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 142 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 11 ಮಂದಿ ಐಸಿಯುನಲ್ಲಿದ್ದಾರೆ. ಸದ್ಯ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತ ಮೂಲದ ಬ್ಯಾಕ್ಟೀರಿಯಾ ಸೋಂಕುಗಳ ಸಂಶೋಧನಾ ರಾಷ್ಟ್ರೀಯ ಸಂಸ್ಥೆಯ (ಎನ್‌ಐಆರ್‌ಬಿ) ತಂಡ ಇಂದೋರ್‌ಗೆ ಆಗಮಿಸಿದೆ ಎಂದು ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯಾಧಿಕಾರಿ ಡಾ. ಮಾಧವ ಪ್ರಸಾದ್ ಹಾಸನಿ ಹೇಳಿದ್ದಾರೆ.
ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ಎನ್‌ಐಆರ್‌ಬಿಐ ಸಂಯೋಜಿತಗೊಂಡಿದ್ದು, ಸೋಂಕು ನಿಗ್ರಹಕ್ಕೆ ಆರೋಗ್ಯ ಇಲಾಖೆಗೆ ಸಹಾಯ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ.
6 ಮಂದಿ ಸಾವಿಗೀಡಾಗಿದ್ದಾರೆ ಎಂದು ಆಡಳಿತ ತಿಳಿಸಿದ್ದರೆ, 10 ಮಂದಿ ಮೃತಪಟ್ಟಿದ್ದಾರೆ ಎಂದು ಮೇಯರ್ ಪುಷ್ಯಮಿತ್ರ ಭಾರ್ಗವ ಹೇಳಿದ್ದಾರೆ. ಆದರೆ 16 ಮಂದಿ ಸಾವಿಗೀಡಾಗಿದ್ದಾರೆ ಎನ್ನುವುದು ಸ್ಥಳೀಯರ ಲೆಕ್ಕ. ಇದರಲ್ಲಿ 6 ತಿಂಗಳ ಕೂಸು ಕೂಡ ಸೇರಿದೆ.
ಘಟನೆ ಬಗ್ಗೆ ಪ್ರಶ್ನಿಸಿದ್ದಕ್ಕೆ 'ಘಂಟಾ' ಎಂದು ಉತ್ತರಿಸಿದ್ದ ಸಚಿವ ಕೈಲಾಶ್ ವಿಜಯವರ್ಗೀಯ ವಿರುದ್ಧ ಕಾಂಗ್ರೆಸ್ ರಾಜ್ಯದಾದ್ಯಂತ ಗಂಟೆ ಭಾರಿಸುವ ಪ್ರತಿಭಟನೆ ಮಾಡಿದೆ.
ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಮಾಡಬೇಕು ಎಂದೂ, ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆ ಸಚಿವ ವಿಜಯವರ್ಗೀಯ ಅವರನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
'16 ಮಂದಿ ಸಾವಿಗೀಡಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಜನರು ನೀಡಿದ ತೀರ್ಪಿನ ಕೊಲೆ ಇದು. ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಪಾಲಿಕೆಯ ನಲ್ಲಿಯಿಂದಲೇ ಕಲುಷಿತ ನೀರು ಬರುತ್ತಿದೆ ಎಂದು ಜನ ಕಳೆದ 8 ತಿಂಗಳಿನಿಂದ ದೂರು ನೀಡುತ್ತಿದ್ದಾರೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗಲೂ ಭಾರತೀಪುರದ ನಲ್ಲಿಗಳಲ್ಲಿ ಕಲುಷಿತ ನೀರೇ ಬರುತ್ತಿದೆ ಎಂದು ಜನರು ಹೇಳುತ್ತಿದ್ದಾರೆ' ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಕಿಡಿ ಕಾರಿದ್ದಾರೆ.
'ಇದು ವ್ಯವಸ್ಥೆ ನಿರ್ಮಿತ ದುರಂತ' ಎಂದು ಮ್ಯಾಗ್ಸೆಸೆ ಪುರಸ್ಕೃತ ನೀರು ಸಂರಕ್ಷಕ ರಾಜೇಂದ್ರ ಸಿಂಗ್ ಹೇಳಿದ್ದಾರೆ. ಆಳವಾಗಿ ಬೇರೂರಿರುವ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದಿದ್ದಾರೆ.
'ದೇಶದ ಅತ್ಯಂತ ಸ್ವಚ್ಛ ನಗರದಲ್ಲಿ ಇದು ಸಂಭವಿಸುವುದಾದರೆ, ಬೇರೆ ನಗರಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಏನಿರಬಹುದು ಎನ್ನುವುದನ್ನು ಅಂದಾಜಿಸಹುದು' ಎಂದು ಹೇಳಿದ್ದಾರೆ.
ನೀರಿನ ಮೂಲಗಳಿಗೆ ಶೌಚಾಲಯದ ನೀರು ಸೇರಿ ಕಲುಷಿತಗೊಂಡು ವಾಂತಿ ಹಾಗೂ ಅತಿಸಾರ ಉಂಟಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

