ಪುದುಕೊಟ್ಟೈ : 'ಪ್ರಸಕ್ತ ವರ್ಷ ನಡೆಯಲಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಗೆಲುವು ಸಾಧಿಸಲಿದೆ. ಈ ಎರಡೂ ರಾಜ್ಯಗಳು ಎನ್‌ಡಿಎ ತೆಕ್ಕೆಗೆ ಸೇರಲಿವೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, 2024ರಿಂದ ಬಿಜೆಪಿ-ಎನ್‌ಡಿಎ ಗೆಲುವುಗಳು, ಹರಿಯಾಣದಲ್ಲಿ ಸತತ 3ನೇ ಬಾರಿಯೂ ವಿಜಯ ಸಾಧಿಸಿದ್ದನ್ನು ಪಟ್ಟಿ ಮಾಡಿದ್ದಾರೆ. ಇದೇ ವೇಳೆ ಎನ್‌ಡಿಎ ತೆಕ್ಕೆಗೆ ಸೇರುವ ಸರದಿ ಈಗ ತಮಿಳುನಾಡು, ಪಶ್ಚಿಮ ಬಂಗಾಳದ್ದು ಎಂದಿದ್ದಾರೆ.
ಆಡಳಿತಾರೂಢ ಡಿಎಂಕೆ ವಿರುದ್ಧ ಹರಿಹಾಯ್ದು, ' ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಡಿಎಂಕೆ ಆಡಳಿತದ ಏಕಮಾತ್ರ ಉದ್ದೇಶ. ಕುಟುಂಬ ರಾಜಕಾರಣವನ್ನು ಶಾಶ್ವತಗೊಳಿಸುವ ಕನಸು ಈ ಬಾರಿ ನನಸಾಗುವುದಿಲ್ಲ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯಗೊಳಿಸುವ ಸಮಯ ಬಂದಾಗಿದೆ' ಎಂದೂ ಹೇಳಿದ್ದಾರೆ.
ಇತ್ತ ಅಮಿತ್ ಶಾ ರ‍್ಯಾಲಿ ನಡೆಯುತ್ತಿರುವಾಗಲೇ ಅತ್ತ ಸೇಲಂ ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖ ಮೈತ್ರಿ ಪಕ್ಷವಾಗಿರುವ ಎಐಎಡಿಎಂಕೆಯ ಮುಖ್ಯಸ್ಥ ಎಡಪ್ಪಾಡಿ ಕೆ.ಪಳನಿಸ್ವಾಮಿ ಕೂಡ ರ್‍ಯಾಲಿ ನಡೆಸಿದರು.
'20% ಕಮಿಷನ್ ಭ್ರಷ್ಟರ ಕೂಟ'
ದೇಶದಲ್ಲೇ ಅತ್ಯಂತ ಭ್ರಷ್ಟ ಆಡಳಿತವೆಂದು ಡಿಎಂಕೆ ಸರ್ಕಾರವನ್ನು ಸಚಿವ ಅಮಿತ್ ಶಾ ದೂರಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಶೇಕಡ 20ರಷ್ಟು ಕಮಿಷನ್ ನೀತಿ ಜಾರಿಯಲ್ಲಿದ್ದು ರಾಜ್ಯದ ಆರ್ಥಿಕತೆಯನ್ನು ಸಾಲ ಹಾಗೂ ಮದ್ಯ ಮಾರಾಟದಿಂದ ನಡೆಸಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ. 'ಡಿಎಂಕೆಯ ಒಬ್ಬ ನಾಯಕನ ವಿರುದ್ಧ ಉದ್ಯೋಗಕ್ಕಾಗಿ ಲಂಚ ಪಡೆಯುವ ಹಗರಣದ ಆರೋಪವಿದ್ದರೆ ಮತ್ತೊಬ್ಬ ನಾಯಕನ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪವಿದೆ. ಇನ್ನೊಬ್ಬ ನಾಯಕ ಗಣಿ ಹಗರಣದಲ್ಲಿ ಸೇರಿಕೊಂಡಿದ್ದಾರೆ' ಎಂದು ಯಾರ ಹೆಸರನ್ನೂ ಉಲ್ಲೇಖಿಸದೆಯೇ ವಾಗ್ದಾಳಿ ನಡೆಸಿದರು. ಜತೆಗೆ 'ಭ್ರಷ್ಟ ಮಂತ್ರಿಗಳೇ ತುಂಬಿರುವ ಈ ಕೂಟದಿಂದ ರಾಜ್ಯ ಪ್ರಗತಿ ಹೊಂದಲು ಸಾಧ್ಯವೇ?' ಎಂದೂ ಪ್ರಶ್ನಿಸಿದರು.

