ಉಪ್ಪಳ: ಪುತ್ರಿಯ ವಿವಾಹ ಸಿದ್ಧತೆ ನಡೆಸುತ್ತಿದ್ದ ಮನೆಯಲ್ಲಿ ಭಾರಿ ದರೋಡೆ ನಡೆದಿದೆ. ಉಪ್ಪಳ ಬಪ್ಪಾಯಿತೊಟ್ಟಿಯ ರುಕ್ಸಾನಾ (44) ಅವರ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ 23.5 ಪವನ್ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಸುಮಾರು ರೂ. 23 ಲಕ್ಷ ಮೌಲ್ಯದ ಚಿನ್ನ ನಾಪತ್ತೆಯಾಗಿದೆ.
ರುಕ್ಸಾನಾ ಅವರ ಮಗಳ ವಿವಾಹಕ್ಕೆ ಸಿದ್ದತೆ ನಡೆಯುತ್ತಿತ್ತು. ಇದರ ಭಾಗವಾಗಿ, ಜನವರಿ 23 ರಂದು ನಿಶ್ಚಿತಾರ್ಥ ನಡೆಯಿತು. ಮದುವೆಯ ಅಗತ್ಯಗಳಿಗಾಗಿ ಮನೆಯಲ್ಲಿ ನವೀಕರಣ ಕಾರ್ಯವೂ ನಡೆಯುತ್ತಿತ್ತು. ಏತನ್ಮಧ್ಯೆ, ಚಿನ್ನ ಕಾಣೆಯಾದ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿದುಬಂದಿತು.
ಜನವರಿ 15 ರಂದು ಮಧ್ಯಾಹ್ನ 2 ಗಂಟೆಯಿಂದ ಜನವರಿ 21 ರಂದು ಸಂಜೆ 6 ಗಂಟೆಯ ನಡುವೆ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿಶ್ಚಿತಾರ್ಥಕ್ಕೂ ಮೊದಲು ಚಿನ್ನವನ್ನು ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿವೆ ಎಂದು ಕಂಡುಬಂದಿದೆ.
ಆರಂಭದಲ್ಲಿ ಕೆಲವು ಸಂಬಂಧಿಕರು ಗದ್ದಲದಲ್ಲಿ ಚಿನ್ನವನ್ನು ಸುರಕ್ಷಿತವಾಗಿರಿಸಲು ಬೇರೆಡೆ ತೆಗೆದಿರಿಸಿರಬಹುದೆಂದು ಕುಟುಂಬ ಭಾವಿಸಿತ್ತು. ನಿಶ್ಚಿತಾರ್ಥ ಸಮಾರಂಭದ ನಂತರ, ಅವರು ಮತ್ತೆ ಸಂಪೂರ್ಣ ಪರಿಶೀಲನೆ ನಡೆಸಿದಾಗ ಚಿನ್ನ ಕಳವಾಗಿರುವುಉದ ದೃಢಪಟ್ಟಿತು. ಬಳಿಕ ರುಕ್ಸಾನಾ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದರು.
ಘಟನೆಯ ಕುರಿತು ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 305(ಎ), 334(1), ಮತ್ತು 332(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಬ್-ಇನ್ಸ್‍ಪೆಕ್ಟರ್ (ಗ್ರೇಡ್) ಜಯೇಶ್ ಪಿ.ಎಸ್ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ತನಿಖೆಯು ಮನೆ ನಿರ್ಮಾಣಕ್ಕಾಗಿ ಬಂದವರು ಮತ್ತು ಇತರರ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ. ಆರೋಪಿಗಳನ್ನು ಇನ್ನೂ ಗುರುತಿಸಲಾಗಿಲ್ಲ.



