ಪಣಜಿ: ಕಳೆದ ತಿಂಗಳು 'ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್'ನಲ್ಲಿ ನಡೆದ ಬೆಂಕಿ ದುರಂತದಲ್ಲಿ 25 ಜನರು ಸಾವಿಗೀಡಾಗಿದ್ದರು. ಆ ನೈಟ್ ಕ್ಲಬ್‌ಗೆ ಕಂದಾಯ ಅಧಿಕಾರಿಗಳು 2024ರಲ್ಲೇ ಅಕ್ರಮ ಕಟ್ಟಡ ಎಂದು ದೂರು ದಾಖಲಿಸಿಕೊಂಡಿರುವುದಾಗಿ ಗೋವಾ ಸರ್ಕಾರ ವಿಧಾನಸಭೆಗೆ ತಿಳಿಸಿದೆ.
ಗೋವಾದ 'ಬರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್'ನಲ್ಲಿ ಡಿಸೆಂಬರ್ 6ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಈ ಕಟ್ಟಡವನ್ನು ಮೊದಲು ಮೈಝಾನ್ ಲೇಕ್ ವ್ಯೂ ರಿಸಾರ್ಟ್ ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಗುತ್ತಿಗೆ ಪಡೆದವರು ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ಎಂದು ಹೆಸರು ಬದಲಿಸಿದ್ದರು. ಮಾತ್ರವಲ್ಲ, ಈ ರೆಸಾರ್ಟ್ ಅನ್ನು ಉಪ್ಪುಗಡ್ಡೆ (ಸಾಲ್ಟ್ ಪ್ಯಾನ್) ಮೇಲೆ ನಿರ್ಮಿಸಲಾಗಿತ್ತು ಹಾಗೂ ಅಕ್ರಮ ಜಾಗ ಬಳಕೆ ಮಾಡಲಾಗಿದೆ ಎಂದು ಸರ್ಕಾರ ವಿಧಾನಸಭೆಗೆ ತಿಳಿಸಿದೆ.
ಚರಂಡಿಯನ್ನು ಒಡೆದುಹಾಕಿ, ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆದು ಕ್ಲಬ್ ಅನ್ನು ನಿರ್ಮಿಸಲಾಗಿದೆ ಎಂದು ತೋರಿಸುವ ದಾಖಲೆಗಳನ್ನು ಗೋವಾದ ಕಂದಾಯ ಸಚಿವ ಅಟನಾಸಿಯೊ ಮಾನ್ಸೆರಾಟ್ಟೆ ಅವರು ಸದನಕ್ಕೆ ನೀಡಿದ್ದಾರೆ.
ಈ ಕುರಿತು ಆಸ್ತಿಯ ಮೂಲ ಮಾಲೀಕರಾದ ಪ್ರದೀಪ್ ಘಾಡಿ ಅಮೋಂಕರ್ ಮತ್ತು ಸುನಿಲ್ ದಿವ್ಕರ್ ಎಂಬುವವರು ಡಿಸೆಂಬರ್ 21, 2023ರಂದು ಬಾರ್ಡೆಜ್ ತಾಲ್ಲೂಕು ಕಂದಾಯ ಅಧಿಕಾರಿಗೆ ದೂರು ದಾಖಲಿಸಿದ್ದರು.
ಸಚಿವರು ಮಂಡಿಸಿದ ದಾಖಲೆಗಳ ಪ್ರಕಾರ, ಡಿಸ್ಕೋಥೆಕ್ (ನೈಟ್‌ಕ್ಲಬ್) ಅನ್ನು ಯಾವುದೇ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸದೆ ನಿರ್ಮಿಸಿರುವುದು ದೊಡ್ಡ ದುರಂತಕ್ಕೆ ಕಾರಣವಾಗಿದೆ.
ರೆಸಾರ್ಟ್ ಮಾಲೀಕ ಸುರಿಂದರ್ ಖೋಸ್ಲಾ ಅವರು ಮಾರಾಟದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭೂ ಪರಿವರ್ತನೆ ಮತ್ತು ವಲಯ ಬದಲಾವಣೆ ಇಲ್ಲದೆ ಕಟ್ಟಡ ನಿರ್ಮಾಣ ನಡೆದಿದೆ ಎಂದು ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಾಡಿಗೆಗೆ ಪಡೆದ ಭೂಮಿಯಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, ಸಾಂಪ್ರದಾಯಿಕವಾಗಿದ್ದ ಚರಂಡಿಯನ್ನು ಒಡೆದು ಹಾಕಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

