HEALTH TIPS

ಚೆನ್ನೈ ಪುಸ್ತಕ ಮೇಳ | ಡಿಜಿಟಲೀಕರಣದಿಂದ ಭಾಷೆಗೆ ಸಾವಿಲ್ಲ: ಪ್ರತಿಭಾ ನಂದಕುಮಾರ್

ಚೆನ್ನೈ: 'ಡಿಜಿಟಲೀಕರಣದಿಂದ ಭಾಷೆಗೆ ಭವಿಷ್ಯವಿದೆಯೇ, ಎಐ ಬಂದಮೇಲೆ ಸಾಹಿತ್ಯ ಸೃಷ್ಟಿಯೂ ಸರಳವಾಗುವುದೇ, ಲೇಖಕರು ತಮ್ಮ ಅನುಭವವನ್ನು ತಮ್ಮ ಭಾಷೆಯಲ್ಲಿ ಬರೆಯಬೇಕೇ ಅಥವಾ ಇಂಗ್ಲಿಷಿನಲ್ಲಿ ಬರೆದರೆ ಜಾಗತಿಕ ಮನ್ನಣೆ ಪಡೆಯಬಹುದೇ? ದ್ರಾವಿಡ ಭಾಷೆಗಳದ್ದು ಪಿಸುಮಾತೋ, ಗಟ್ಟಿ ಧ್ವನಿಯೋ…?

-ಹೀಗೆ ಹತ್ತು ಹಲವು ಚರ್ಚೆ, ಪ್ರಶ್ನೋತ್ತರಗಳಿಗೆ ಚೆನ್ನೈನ ಅಂತರರಾಷ್ಟ್ರೀಯ ಪುಸ್ತಕ ಮೇಳದ ಶನಿವಾರದ 'ಫೋರ್ ಲಾಂಗ್ವೇಜಸ್: ಒನ್ ಥಂಡರ್' ಗೋಷ್ಠಿ ಸಾಕ್ಷಿಯಾಯಿತು.

ಡಿಜಿಟಲೀಕರಣದಿಂದ ಕನ್ನಡ ಸೇರಿದಂತೆ ಯಾವುದೇ ಭಾಷೆ ಅಳಿವಿನಂಚಿಗೆ ಸರಿಯುವ ಸಾಧ್ಯತೆ ಇದೆಯೇ ಅನ್ನುವ ಪ್ರಶ್ನೆಗೆ ಉತ್ತರಿಸಿದ ಕನ್ನಡದ ಕವಯಿತ್ರಿ ಪ್ರತಿಭಾ ನಂದಕುಮಾರ್, 'ಜಗತ್ತು ಡಿಜಿಟಲೀಕರಣವಾದ ತಕ್ಷಣ ಯಾವುದೇ ಭಾಷೆ ಸಾಯುವುದಿಲ್ಲ. ಬದಲಿಗೆ ಅದು ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಜೀವಂತವಾಗಿರಲು ಸಾಧ್ಯ. ಹಿಂದೆ ಟೈಪ್‌ರೈಟರ್, ಕಂಪ್ಯೂಟರ್ ಬಂದಾಗಲೂ ಕನ್ನಡ ಭಾಷೆಗೆ ಅಳಿವುಂಟಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಕನ್ನಡದಲ್ಲೇ ಟೈಪ್‌ರೈಟರ್ ಬಂತು, ಕಂಪ್ಯೂಟರ್‌ನಲ್ಲೂ ಒಂದಲ್ಲ ಹಲವು ಕನ್ನಡ ಸಾಫ್ಟ್‌ವೇರ್, ಆಯಪ್‌ಗಳು ಬಂದವು. ಹಾಗಾಗಿ, ತಂತ್ರಜ್ಞಾನದ ಬೆಳವಣಿಗೆಯ ಜತೆಗೇ ಭಾಷೆಯೂ ಬೆಳವಣಿಗೆ ಸಾಧಿಸುತ್ತಿದೆ. ಡಿಜಿಟಲ್ ವೇದಿಕೆಗಳಲ್ಲೇ ಭಾಷೆಗೆ ಹೆಚ್ಚು ಭವಿಷ್ಯವಿದೆ' ಎಂದು ಪ್ರತಿಪಾದಿಸಿದರು.

ಪ್ರಾದೇಶಿಕ ಭಾಷೆಗಳು ಬರೀ ಪಿಸುಮಾತಾಗಿವೆಯೋ ಅಥವಾ ಜಾಗತಿಕ ಧ್ವನಿಯಾಗಿವೆಯೋ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಹೈದರಾಬಾದ್‌ನ ಪ್ರಾಧ್ಯಾಪಕ ರಾಜೇಂದ್ರ ಪ್ರಸಾದ್, 'ಲೇಖಕರು ತಮ್ಮ ಅನುಭವಗಳನ್ನು ತಮ್ಮದೇ ಭಾಷೆಯಲ್ಲಿ ಬರೆಯಬೇಕು. ಪ್ರಾದೇಶಿಕ ಭಾಷೆಯಲ್ಲಿ ಬರೆದಾಕ್ಷಣ ಅದು ಪಿಸುಮಾತಾಗುವುದಿಲ್ಲ, ನಮ್ಮ ಭಾಷೆಯೂ ಗಟ್ಟಿ ಧ್ವನಿಯಾಗಿ ರೂಪುಗೊಂಡಿದೆ. ವಸಾಹತುಶಾಹಿ ವ್ಯವಸ್ಥೆ ನಮ್ಮ ಭಾಷೆಗಳನ್ನು ಪಿಸುಮಾತನ್ನಾಗಿ ಮಾಡಿವೆ ಅಷ್ಟೇ. ವಾಸ್ತವವಾಗಿ ಸಂಗಮಂ ಕಾಲದಿಂದಲೂ ದಕ್ಷಿಣದ ಪ್ರಾದೇಶಿಕ ಭಾಷೆಗಳು ಪ್ರಗತಿಪರವಾಗಿ ಮತ್ತು ಗಟ್ಟಿ ಧ್ವನಿಯಲ್ಲಿ ತಮ್ಮ ಅನುಭವವನ್ನು ದಾಖಲಿಸಿವೆ. ರಷ್ಯನ್, ಜರ್ಮನ್, ಫ್ರೆಂಚ್ ಲೇಖಕರು ತಮ್ಮ ಭಾಷೆಯ ಮೂಲಕವೇ ಜಗತ್ತನ್ನು ತಲುಪಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ' ಎಂದರು.

ಇದಕ್ಕೆ ದನಿಗೂಡಿದ ಪ್ರತಿಭಾ, 'ಕನ್ನಡಕ್ಕೆ ಬುಕರ್ ಪ್ರಶಸ್ತಿ ಬಂದಾಕ್ಷಣ ಲೇಖಕರು ಜಾಗತಿಕ ಮಟ್ಟಕ್ಕೇರಲು ಇಂಗ್ಲಿಷಿನಲ್ಲಿ ಬರೆಯಬೇಕು ಎಂದು ಭಾವಿಸತೊಡಗಿದ್ದಾರೆ. ಆದರೆ, ಯಾವುದೇ ಲೇಖಕ ತನ್ನ ಭಾಷೆಯ ಜನರಿಗಾಗಿಯೇ ಅವರ ಭಾಷೆಯಲ್ಲೇ ಬರೆಯುತ್ತಾನೆಯೋ ಹೊರತು, ಜಾಗತಿಕ ಓದುಗರಿಗಾಗಿ ಅಲ್ಲ' ಎಂದರು.

ಅನುವಾದಕ ಎ.ಜೆ. ಥಾಮಸ್, 'ಪದಶಃ ಅನುವಾದ ಮಾಡುವ ಬದಲು ಭಾವಾನುವಾದದ ಮಾಡಬೇಕು. ಅನುವಾದಕನಿಗೂ ಸ್ವಾತಂತ್ರ್ಯದ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.

ಲೇಖಕಿ ಡಾ.ಎಚ್.ಎಸ್. ಅನುಪಮಾ ಗೋಷ್ಠಿಯನ್ನು ನಿರ್ವಹಿಸಿದರು.

'ಹೆಣ್ಣು ಅಳಿವಿನಂಚಿನ ಪ್ರಭೇದವಲ್ಲ'

ಭಾಷೆ, ಮಹಿಳೆ ಮತ್ತು ಪ್ರಕೃತಿಯನ್ನು ರಕ್ಷಿಸಬೇಕು ಅನ್ನುವ ವಾದವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಿಭಾ ನಂದಕುಮಾರ್, 'ಭಾಷೆ, ಪ್ರಕೃತಿಗೆ ಸರಿಸಮಾನಾರ್ಥದಲ್ಲಿ ಮಹಿಳೆಯರನ್ನು ರಕ್ಷಿಸಬೇಕು ಅನ್ನುವುದೇ ಸರಿಯಲ್ಲ. ಮಹಿಳೆಯನ್ನು ಸಂರಕ್ಷಿಸಬೇಕು ಅನ್ನುವುದಕ್ಕೆ ಆಕೆ ಯಾವತ್ತೂ ಅಳಿವಿನಂಚಿನ ಪ್ರಭೇದವಲ್ಲ' ಎಂದರು.

'ಮಹಿಳಾ ಸಾಹಿತ್ಯದ ಕುರಿತ ಪ್ರಶ್ನೆಗೆ ಹಿಂದೆ ಮಹಿಳೆಯರು ಬರೆದದ್ದನ್ನು ಅವರ ವೈಯಕ್ತಿಕ ಅನುಭವ, ಬದುಕಿಗೆ ಥಳಕು ಹಾಕಿ ನೋಡಲಾಗುತ್ತಿತ್ತು. ಆದರೆ, ಅದು ಈಗೀಗ ಬದಲಾಗಿದೆ. ಯಾರು ಏನೇ ಅಂದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ನಮಗೆ ಏನನ್ನು ಬರೆಯಬೇಕು ಅನಿಸುವುದೋ ಅದನ್ನು ಬರೆಯುತ್ತಿದ್ದೇವೆ. ಅದನ್ನೇ ಮುಂದುವರಿಸುತ್ತೇವೆ' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಶಿಕ್ಷಣ ಇಲಾಖೆಯ ಮುಖ್ಯ ಆಯುಕ್ತ ಡಾ. ಕೆ. ಚಂದ್ರಮೋಹನ್ ಅವರು ಕನ್ನಡದ ಕವಿ ಜಿ.ಎಸ್. ಶಿವರುದ್ರಪ್ಪ ಅವರ 'ಎದೆ ತುಂಬಿ ಹಾಡಿದೆನು ಅಂದು ನಾನು' ಕವಿತೆಯನ್ನು ವಾಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries