ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಯ್ಕಾಪಿನ ವಕೀಲೆಯೊಬ್ಬರ ಮನೆಗೆ ನುಗ್ಗಿದ ಕಳ್ಳರು ನಗ, ನಗದು ದೋಚಿದ್ದಾರೆ. ನಾಯ್ಕಾಪು ನಿವಾಸಿ, ಕಾಸರಗೋಡು ಬಾರ್ ಅಸೋಸಿಯೇಶನ್‍ನಲ್ಲಿ ವಕೀಲರಾಗಿರುವ ಚೈತ್ರಾ ಅವರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯವರು ಕುಂಬಳೆ ಜಾತ್ರೆಗೆ ತೆರಳಿದ್ದ ಸಂದರ್ಭ ಮನೆ ಹಿಂದಿನ ಬಾಗಿಲು ಒಡೆದು ನುಗ್ಗಿ ಕಪಾಟಿನಲ್ಲಿದ್ದ ನೆಕ್ಲೇಸ್, ಬಳೆ, ಉಂಗುರ, ಬ್ರೇಸ್‍ಲೆಟ್, ಬೆಂಡೋಲೆ, ಮಾಲೆ ಸೇರಿದಂತೆ 29ಪವನು ಚಿನ್ನ, 25ಸಾವಿರ ರೂ.ಮೌಲ್ಯದ ಬೆಳ್ಳಿ, 5ಸಾವಿರ ರೂ. ನಗದು ಕಳವುಗೈಯಲಾಗಿದೆ.
ಭಾನುವಾರ ಸಂಜೆ 6ಕ್ಕೆ ಮನೆಯಿಂದ ತೆರಳಿದ್ದು, ರಾತ್ರಿ 8ಕ್ಕೆ ವಾಪಸಾಗುವ ಮಧ್ಯೆ ಎರಡು ತಾಸುಗಳೊಳಗೆ ಈ ಕಳವುನಡೆದಿದೆ. ಮನೆಯವರು ಆಗಮಿಸಿದಾಗ ಮನೆಯೊಳಗಿನ ಲೈಟುಗಳು ಉರಿಯುತ್ತಿರುವುದನ್ನು ಕಂಡು ಧಾವಿಸಿದಾಗ ಹಿಂಬಾಗಿಲು ಒಡೆದರುವುದು ಕಂಡುಬಂದಿತ್ತು. ಬಟ್ಟೆಬರೆ ಚಲ್ಲಾಪಿಲ್ಲಿಗೊಳಿಸಲಾಗಿದ್ದು, ಕಪಾಟಿನಲ್ಲಿದ್ದ ಚಿನ್ನ, ಬೆಳ್ಳಿ, ನಗದು ಕಳವುಗೈಯಲಾಗಿತ್ತು. ಶ್ವಾನದಳ, ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಹಾಗೂ ಬದಿಯಡ್ಕಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಹಲವಾರು ಕಳವು ಕೃತ್ಯಗಳು ನಡೆದಿದ್ದು, ಆರೋಪಿಗಳ ಪತ್ತೆ ಇದುವರೆಗೆ ಸಾಧ್ಯವಾಗದಿರುವುದು ಕಳವು ಕೃತ್ಯ ಹೆಚ್ಷಚಲು ಕಾರಣವಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ.

