HEALTH TIPS

ಇರಾನ್‌ ವಾಯುಪ್ರದೇಶ ಮುಚ್ಚಿರುವುದರಿಂದ ಅಮೆರಿಕಕ್ಕೆ ತೆರಳಬೇಕಿದ್ದ 3 ವಿಮಾನ ರದ್ದು

ನವದೆಹಲಿ: ಇರಾನ್‌ ವಾಯುಪ್ರದೇಶ ಮುಚ್ಚಿರುವುದರಿಂದ ಅಮೆರಿಕಕ್ಕೆ ತೆರಳಬೇಕಿದ್ದ ಕನಿಷ್ಠ ಮೂರು ವಿಮಾನ ಸಂಚಾರಗಳನ್ನು ಏರ್‌ ಇಂಡಿಯಾ ಗುರುವಾರ ರದ್ದುಗೊಳಿಸಿದೆ. ಯುರೋಪ್‌ಗೆ ತೆರಳುವ ಕೆಲ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ರಾಷ್ಟ್ರದ ರಾಜಧಾನಿಯಿಂದ ನ್ಯೂಯಾರ್ಕ್‌ ಮತ್ತು ನೇವಾರ್ಕ್‌ಗೆ ತೆರಳಬೇಕಿದ್ದ ಎರಡು ವಿಮಾನ ಹಾಗೂ ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳಬೇಕಿದ್ದ ಒಂದು ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.

'ದೆಹಲಿಯಿಂದ ನ್ಯೂಯಾರ್ಕ್‌ಗೆ (ಜೆಎಫ್‌ಕೆ) ಹೊರಟ ವಿಮಾನ ಎಐ101 ಟೇಕ್‌ ಆಫ್‌ ಆದ ಸ್ವಲ್ಪ ಸಮಯದಲ್ಲೇ, ಇರಾನ್‌ನ ವಾಯುಪ್ರದೇಶ ಮುಚ್ಚಿರುವ ಸುದ್ದಿ ಬಂದಿದ್ದರಿಂದ ದೆಹಲಿಗೆ ಹಿಂತಿರುಗಬೇಕಾಯಿತು. ದಟ್ಟವಾದ ಮಂಜಿನ ನಡುವೆ ವಿಮಾನ ನಿಲ್ದಾಣದಲ್ಲಿ ಇಳಿದ ವಿಮಾನ ರನ್ ವೇಯಲ್ಲಿ ಚಲಿಸುತ್ತಿದ್ದಾಗ ಯಾವುದೋ ವಸ್ತು ಬಡಿದ ಪರಿಣಾಮ ಬಲ ಇಂಜಿನ್‌ಗೆ ಹಾನಿಯಾಗಿದೆ' ಎಂದು ಏರ್ ಇಂಡಿಯಾ ಗುರುವಾರ ತಿಳಿಸಿದೆ.

'ಇರಾನ್‌ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದ್ದು, ಅಲ್ಲಿನ ವಾಯುಪ್ರದೇಶವನ್ನು ಮುಚ್ಚಲಾಗಿದೆ. ನಮ್ಮ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಆ ಪ್ರದೇಶದ ಮೇಲೆ ಹಾರುವ ವಿಮಾನಗಳು ಈಗ ಪರ್ಯಾಯ ಮಾರ್ಗದ ಮೂಲಕ ಸಂಚರಿಸುತ್ತಿವೆ. ಇದು ವಿಳಂಬಕ್ಕೆ ಕಾರಣವಾಗಿದೆ' ಎಂದು ಏರ್‌ ಇಂಡಿಯಾ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

ಅಮೆರಿಕ ಮತ್ತು ಯುರೋಪ್‌ಗೆ ತೆರಳುವ ಏರ್‌ ಇಂಡಿಯಾ ವಿಮಾನಗಳು ಇರಾನ್‌ನ ವಾಯುಪ್ರದೇಶವನ್ನು ಬಳಸುತ್ತವೆ. ಈಗ ಇರುವ ಪರ್ಯಾಯ ಆಯ್ಕೆಯೆಂದರೆ ಇರಾಕ್‌ ವಾಯುಪ್ರದೇಶದ ಮಾರ್ಗ ಬಳಸುವುದು. ಆದರೆ, ಈ ವಾಯುಪ್ರದೇಶವನ್ನು ಬಳಸುವುದರಿಂದ ಹೆಚ್ಚಿನ ಸಮಯ ಹಾರಾಟ ನಡೆಸಬೇಕಾಗುತ್ತದೆ. ದೀರ್ಘಕಾಲ ಹಾರಾಟ ನಡೆಸಲು ಬೇಕಾದಷ್ಟು ಇಂಧನ ಈ ವಿಮಾನಗಳಲ್ಲಿ ಇರುವುದಿಲ್ಲ. ಆದ್ದರಿಂದ ಅಮೆರಿಕಕ್ಕೆ ಹೋಗುವ ಕೆಲವು ವಿಮಾನ ಸೇವೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿರುವುದರಿಂದ, ಏರ್‌ ಇಂಡಿಯಾ ಈಗಾಗಲೇ ಪಶ್ಚಿಮಕ್ಕೆ ಹೋಗುವ ಹಲವು ವಿಮಾನಗಳಿಗೆ ದೀರ್ಘ ಮಾರ್ಗಗಳನ್ನು ಬಳಸುತ್ತಿದೆ.

ಇಂಡಿಗೊ, ಸ್ಪೈಸ್‌ಜೆಟ್‌ ವಿಮಾನ ಸೇವೆ ವ್ಯತ್ಯಯ

'ಇರಾನ್‌ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ಕಾಮನ್‌ವೆಲ್ತ್‌ ಗಣರಾಜ್ಯ ದೇಶಗಳು (ಸಿಐಎಸ್), ಯುರೋಪ್‌ ಮತ್ತು ಟರ್ಕಿಗೆ ಹೋಗುವ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿ ನಿಭಾಯಿಸಲು ಮತ್ತು ಬಾಧಿತ ಗ್ರಾಹಕರ ನೆರವಿಗೆ ಧಾವಿಸಲು ಸಂಸ್ಥೆಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ' ಎಂದು ಇಂಡಿಗೊ ಸಂಸ್ಥೆ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

'ಉಜ್ಬೇಕಿಸ್ತಾನ, ಕಜಕ‌ಸ್ತಾನ, ಅಜರ್‌ಬೈಜಾನ್‌, ಜಾರ್ಜಿಯಾಕ್ಕೆ ಹೋಗುವ ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಕೆಲವು ಸೇವೆಗಳನ್ನು ರದ್ದುಗೊಳಿಸಲಾಗಿದೆ' ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಸ್ಪೈಸ್‌ಜೆಟ್‌ ಸಂಸ್ಥೆಯು ಸಹ, 'ಇರಾನ್‌ ವಾಯುಪ್ರದೇಶ ಮುಚ್ಚಿರುವುದರಿಂದ ತನ್ನ ಕೆಲವು ವಿಮಾನಗಳ ಹಾರಾಟದ ಮೇಲೂ ಪರಿಣಾಮ ಬೀರಬಹುದು' ಎಂದು 'ಎಕ್ಸ್‌'ನಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries